ಹೊರ, ಒಳಗುತ್ತಿಗೆ ಪದ್ಧತಿ ರದ್ದುಗೊಳಿಸಿ

ಬಾಗಲಕೋಟೆ: ಹೊರ ಹಾಗೂ ಒಳ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ನೇತೃತ್ವದಲ್ಲಿ ಜಿಲ್ಲೆಯ ದಿನಗೂಲಿ ನೌಕರರು ಮಂಗಳವಾರ ಧರಣಿ ನಡೆಸಿದರು.

ಇಲ್ಲಿನ ಜಿಲ್ಲಾಡಳಿತ ಭವನ ಎದುರು ದಿನವಿಡೀ ಧರಣಿ ನಡೆಸಿದ ದಿನಗೂಲಿ ನೌಕರರು ಸಂಜೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ ಅವರಿಗೆ ಮನವಿ ಸಲ್ಲಿಸಿದರು. ದಿನಗೂಲಿ ನೌಕರರು ಅನೇಕ ಸಮಸ್ಯೆ, ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು ಯಾರೂ ಕ್ಯಾರೇ ಎನ್ನುತ್ತಿಲ್ಲ. ಎಲ್ಲ ಸರ್ಕಾರಗಳು ದಿನಗೂಲಿ ನೌಕರರ ಕುರಿತು ನಿರ್ಲಕ್ಷ್ಯ ಧೋರಣೆ ತಾಳುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇಮಾಭಿವೃದ್ಧಿ ಅಧಿನಿಯಮದಲ್ಲಿ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ನೀಡಬೇಕು. ರಾಜ್ಯ ಸರ್ಕಾರಿ ನೌಕರರರಿಗೆ ವಿಸ್ತರಿಸುವಂತೆ 1ನೇ ಏಪ್ರಿಲ್ 2018ರಿಂದಲೇ ನೀಡ ಬೇಕು. ಶೇ.100ರಷ್ಟು ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ, ಭತ್ಯೆ ನೀಡ ಬೇಕು. ಗುತ್ತಿಗೆನೌಕರರನ್ನು ಅವರು ಕೆಲಸ ಮಾಡುತ್ತಿರುವ ಹುದ್ದೆಗಳಲ್ಲಿ ಕಾಯಂಗೊಳಿಸಬೇಕು. 19.9.2014ರ ಆದೇಶ ತಿದ್ದುಪಡಿ ಮಾಡಬೇಕು. ದಿನಗೂಲಿ ನೌಕರರನ್ನು ಖಾಲಿ ಹುದ್ದೆಗಳಿಗೆ ಭರ್ತಿ ಮಾಡಬೇಕು. ಕಾಯಂ ಗೊಂಡ ನೌಕರರ ಸೇವೆ ಪಿಂಚಣಿಗೆ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಮಹಾಮಂಡಳ ಜಿಲ್ಲಾಧ್ಯಕ್ಷ ರಾಮಚಂದ್ರ ಸಾಳುಂಕೆ, ಉಪಾಧ್ಯಕ್ಷ ಬಿ.ಜಿ. ಮಠಪತಿ, ಬಿ.ಎಸ್. ಗೌಡರ, ಆರ್.ಕೆ. ಗೌಡ, ಎಂ.ವಿ. ನರಗುಂದ ಪ್ರತಿಭಟನೆ ನೇತೃತ್ವದ ವಹಿಸಿದ್ದರು.