ಪೊಲೀಸ್ರ ಮಾತು ಒರಟು ಎಂಬ ಪೂರ್ವಾಗ್ರಹದಿಂದಲೇ ಅದೆಷ್ಟೋ ಜನ ಅನ್ಯಾಯ ಎದುರಿಸಲು ಠಾಣೆಗಳ ಮೆಟ್ಟಿಲೇರಲು ಹಿಂದೇಟು ಹಾಕುತ್ತಿದ್ದಾರೆ. ಈ ಕಟುಸತ್ಯ ಮನಗಂಡ ಪೊಲೀಸ್ ಇಲಾಖೆ, ರಾಜ್ಯದ ಎಲ್ಲ ಠಾಣೆಗಳಲ್ಲಿ ಸ್ವಾಗತಕಾರರನ್ನು ನಿಯೋಜಿಸಿದೆ. ಯಾವ ಠಾಣೆಗಳು ಜನಪರ ಕಾರ್ಯದಲ್ಲಿ ತೊಡಗಿಲ್ಲವೋ ಅವರಿಗೆ ಚುರುಕು ಮುಟ್ಟಿಸುವ ಕಾರ್ಯವೂ ನಡೆದಿದೆ. ಆ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳೇ ರಿಯಾಲಿಟಿ ಚೆಕ್ ನಡೆಸತೊಡಗಿದ್ದಾರೆ.
ನೊಂದವರಿಗೆ ಹಾಗೂ ಶೋಷಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ಪಂದಿಸಿರುವ ‘ಟಾಪ್ ಟೆನ್’ ಠಾಣೆಗಳ ಪಟ್ಟಿ ಬಿಡುಗಡೆ ಕ್ರಮವನ್ನೂ ಇಲಾಖೆ ಅಳವಡಿಸಿಕೊಂಡಿದೆ. ಇತ್ತೀಚಿನ ಪಟ್ಟಿಯಂತೆ ಕ್ರಮವಾಗಿ ಬಾಗಲಕೋಟೆ, ಉಡುಪಿ, ವಿಜಯಪುರ, ಮಂಗಳೂರು ನಗರ, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ-ಧಾರವಾಡ ನಗರ, ಗದಗ, ಧಾರವಾಡ (ಎಸ್ಪಿ) ಹಾಗೂ ಬೆಂಗಳೂರು ಡಿಸಿಪಿ ಪಶ್ಚಿಮ ವಿಭಾಗ ಟಾಪ್ಟೆನ್ ಸ್ಥಾನ ಗಿಟ್ಟಿಸಿಕೊಂಡಿವೆ.
ಸಿಬ್ಬಂದಿಗೆ ಮೆಚ್ಚುಗೆ ಪತ್ರ: ಸ್ವಾಗತ ಕೇಂದ್ರಗಳ ನಿರ್ವಹಣೆಯಿಂದಾಗಿ ಆರು ತಿಂಗಳಿನಿಂದ ಪೊಲೀಸ್ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ಕಂಡುಬರುತ್ತಿದೆ. ಠಾಣೆಗೆ ಬಂದ ನಂತರ ಸಮಸ್ಯೆ ಇತ್ಯರ್ಥವಾಗಿ ಇಲಾಖೆ ಜನತೆಯೊಂದಿಗಿದೆ ಎಂಬ ಧೈರ್ಯ ಹಾಗೂ ಆತ್ಮವಿಶ್ವಾಸ ಸಾರ್ವಜನಿಕರಲ್ಲಿ ಮೂಡತೊಡಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಜನರೊಂದಿಗೆ ಸೌಜನ್ಯ ಮತ್ತು ಆಪ್ತತೆಯಿಂದ ವರ್ತಿಸಿದ ಸಿಬ್ಬಂದಿಗೆ ಮೆಚ್ಚುಗೆ ಪತ್ರ ನೀಡಿ ಇಲಾಖೆಯಿಂದ ಪ್ರೋತ್ಸಾಹಿಸಲಾಗುತ್ತಿದೆ ಎನ್ನುತ್ತಾರೆ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್.
ರೈಲ್ವೆ ಪೊಲೀಸ್ ಘಟಕವೂ ಸ್ವಾಗತಕಾರರನ್ನು ನಿಯೋಜಿಸಲು ಮುಂದಾಗಿದೆ. ಮೈಸೂರು ನಗರದಲ್ಲಿ ಸಂದರ್ಶಕರ ಮಾಹಿತಿಗಾಗಿ ಪ್ರತ್ಯೇಕ ವೆಬ್ಸೈಟ್ ನಿರ್ವಹಣೆ ಮಾಡಲಾಗುತ್ತಿದೆ.
200 ಠಾಣೆ ಸಿಬ್ಬಂದಿ ಮೇಲೆ ಕ್ರಮ
ದೂರು ನೀಡಲು ಬಂದವರೊಂದಿಗೆ ಅಸಭ್ಯವಾಗಿ ವರ್ತಿಸಿ, ದರ್ಪ ಮೆರೆದಿರುವ ಬೆಳಗಾವಿಯ ಮಾಳಮಾರುತಿ, ಹಿರೇಬಾಗೇವಾಡಿ, ಖಡೇಬಜಾರ್ ಮತ್ತು ಮಾರಿಹಾಳ, ಹಾರೋಗೇರಿ, ನೇಸರಗಿ, ನಂದಗಡ, ಕುಲಗೋಡ, ಅಂಕಲಗಿ. ವಿಜಯಪುರದ ಝುಳಕಿ, ಕೊಲ್ಹಾರ, ಮನಗೂಳಿ, ಹೊರ್ತಿ ಠಾಣೆ. ಬಾಗಲಕೋಟೆ, ಗುಳೇದಗುಡ್ಡ, ಕೆರೂರ, ಬನಹಟ್ಟಿ, ತೇರದಾಳ, ಲೋಕಾಪುರ. ಧಾರವಾಡದ ಕುಂದಗೋಳ, ಗರಗ. ಗದಗ ಗ್ರಾಮೀಣ, ನರಗುಂದ ಹಾಗೂ ಸಂಚಾರ ಪೊಲೀಸ್ ಠಾಣೆ ಸೇರಿ ರಾಜ್ಯದ 200ಕ್ಕೂ ಅಧಿಕ ಠಾಣಾಧಿಕಾರಿಗಳ ವಿರುದ್ಧ ದೋಷಾರೋಪ ಪತ್ರ ಹೊರಡಿಸಲಾಗಿದೆ.
ಸ್ವಾಗತಕಾರರಿಗೆ ತರಬೇತಿ
ಆರಂಭದಲ್ಲಿ ಜನಸ್ನೇಹಿ ವ್ಯವಸ್ಥೆಯಡಿ ಠಾಣೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ ಸಿಬ್ಬಂದಿ ವರ್ತನೆ ಮೇಲೆ ಕಣ್ಣಿಡಲಾಗಿತ್ತು. ಗಮನಾರ್ಹ ಬದಲಾವಣೆ ಕಾಣದ ಕಾರಣಕ್ಕೆ ಸ್ವಾಗತಕಾರರ ಕೇಂದ್ರ ಆರಂಭಿಸಲಾಗಿದೆ. ಕಡ್ಡಾಯವಾಗಿ ಓರ್ವ ಮಹಿಳಾ ಸಿಬ್ಬಂದಿಯನ್ನು ಸ್ವಾಗತಕೇಂದ್ರದಲ್ಲಿ ನಿಯೋಜಿಸಲಾಗುತ್ತಿದೆ. ಪ್ರತಿ ಠಾಣೆಗೆ ಇಬ್ಬರು ಸ್ವಾಗತಕಾರರನ್ನು ಆಯ್ಕೆ ಮಾಡಿದ್ದು, ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಕೇಂದ್ರ ಆರಂಭಿಸಲು ಪ್ರತಿ ಠಾಣೆಗೂ ಲಕ್ಷ ರೂ. ವಿಶೇಷ ಅನುದಾನ ನೀಡಿ, ನಿರ್ವಹಣೆಗೆ ಪ್ರತ್ಯೇಕ ಮಾರ್ಗಸೂಚಿ ಅಳವಡಿಸಲಾಗಿದೆ.
ಹೆಚ್ಚು ಪ್ರಕರಣ ದಾಖಲಾದರೆ ಅಪರಾಧ ಹೆಚ್ಚಾದಂತಲ್ಲ. ಪೊಲೀಸರು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದರ್ಥ. ಠಾಣೆಗೆ ಬಂದವರ ಸಮಸ್ಯೆ ಇತ್ಯರ್ಥವಾಗಬೇಕು ಎಂಬುದು ಸರ್ಕಾರದ ಆಶಯ. ಹೀಗಾಗಿ ಸ್ವಾಗತ ಕೇಂದ್ರ ಆರಂಭಿಸಿ ಅನ್ಯಾಯಕ್ಕೊಳಗಾದವರಿಗೆ ಸ್ಪಂದಿಸುವ ಕಾರ್ಯ ನಿರ್ವಹಿಸಲಾಗುತ್ತಿದೆ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
| ರವಿ ಗೋಸಾವಿ ಬೆಳಗಾವಿ