ಶಿರಸಿ: ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ, ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಸ್ಥಾನವನ್ನು ಪಡೆಯುವ ವಿದ್ಯಾರ್ಥಿಗಳ ಸಮೂಹವೇ ಇಲ್ಲಿದೆ. ಆದರೆ, ಐಐಟಿ ಶಿಕ್ಷಣಕ್ಕೆ ತೆರಳುವವರ ಸಂಖ್ಯೆ ಕಡಿಮೆ. ಸೂಕ್ತ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ ನೀಡುವ ಶಿಕ್ಷಣ ಸಂಸ್ಥೆ ನಗರದಲ್ಲಿ ಆಗಲಿ ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಐಐಟಿಯಲ್ಲಿ ಓದಿ ವಿಶ್ವಖ್ಯಾತಿಗಳಿಸಿದವರನ್ನು ಪಟ್ಟಿ ಮಾಡುವಾಗ ನಗರದವರೇ ಆದ ನಂದನ್ ನೀಲೇಕಣಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಆದರೆ, ಅವರು ಜೆಇಇ ಪರೀಕ್ಷೆ ತರಬೇತಿ ಪಡೆದಿದ್ದು ಹೊರ ಜಿಲ್ಲೆಯಲ್ಲಿ. ಪ್ರತಿ ವರ್ಷದ ಪಿಯುಸಿ ಫಲಿತಾಂಶ ಹೊರಬಂದಾಗ ಉತ್ತಮ ಅಂಕ ಪಡೆದವರ ದೊಡ್ಡ ಪಟ್ಟಿಯೇ ತಾಲೂಕಿನಲ್ಲಿ ಕಂಡುಬರುತ್ತಿದೆ. ಆದರೆ, ಐಐಟಿ ಕ್ಷೇತ್ರಕ್ಕೆ ತೆರಳುವವರ ಸಂಖ್ಯೆ ನಗಣ್ಯ.
ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಮಲೆನಾಡಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ವಿಭಿನ್ನ ಮತ್ತು ಅಧಿಕ. ಕೃಷಿ ಆದಾಯವನ್ನು ಆಧರಿಸಿ ಮಲೆನಾಡಿನ ವಿದ್ಯಾರ್ಥಿಗಳ ಕಾರ್ಯಚಟುವಟಿಕೆ ನಿಗದಿಗೊಳ್ಳುತ್ತದೆ. ಪ್ರತಿ ದಿನ ಒಂದೆರಡು ಕಿ. ಮೀ. ನಡೆದುಬಂದು, ಬಸ್ ಏರಿ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿದ್ದಾರೆ. ದೈನಂದಿನ ಅಭ್ಯಾಸಕ್ಕೆ ನೀಡಬೇಕಾದ ಸಮಯ ಬಸ್ ಕಾಯುವುದರಲ್ಲಿ, ಪ್ರಯಾಣಿಸುವುದರಲ್ಲಿ ವ್ಯಯವಾಗುತ್ತದೆ. ಕೃಷಿಕಾರ್ಯದಲ್ಲಿ ನಿರತರಾಗುವ ತಂದೆ ತಾಯಿಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗುವಷ್ಟು ಪ್ರಜ್ಞಾವಂತರಾಗಿರುವುದಿಲ್ಲ, ಸಮಯವೂ ಸಿಗುವುದಿಲ್ಲ. ಇಷ್ಟೆಲ್ಲ ಎದುರಿಸಿ ಉತ್ತಮ ಸಾಧನೆ ತೋರಿದರೂ ಮುಂದೇನು ಎಂಬ ಬಗೆಗೆ ಸೂಕ್ತ ಮಾರ್ಗದರ್ಶನ ಸಹ ಲಭ್ಯವಾಗುವುದಿಲ್ಲ. ಐಐಟಿ ಶಿಕ್ಷಣ ತರಬೇತಿಗೆ ಹೊರ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕು, ಕೃಷಿಯ ಅನಿಶ್ಚಿತ ಆದಾಯದಲ್ಲಿಯೇ ವಿದ್ಯಾರ್ಥಿಯ ಖರ್ಚು ನಿಭಾಯಿಸಬೇಕು.
ನಗರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಹಲವು ಸಂಸ್ಥೆಗಳಿವೆ. ಸಾಮಾಜಿಕ ಕಾರ್ಯ ನಡೆಸುವ ಅನೇಕ ಗಣ್ಯರಿದ್ದಾರೆ. ಜನಪ್ರತಿನಿಧಿಗಳು ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ. ಶಿರಸಿಯಲ್ಲಿ ಐಐಟಿ ತರಬೇತಿ ಕೇಂದ್ರ ಸ್ಥಾಪನೆಗೆ ಏಕೆ ಪ್ರಯತ್ನಿಸಬಾರದು ಎಂಬ ಮಾತು ಕೇಳಿಬರುತ್ತಿದೆ.
ಐಐಟಿ ಶಿಕ್ಷಣ ಕೊಡಿಸುವಲ್ಲಿ ತಂದೆ ತಾಯಿಯ ಪಾತ್ರ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾದದ್ದು. ಮಕ್ಕಳೇ ಹುಡುಕಿಕೊಂಡು ಅತ್ತ ಹೋದರೂ ಪಾಲಕರು ಹೆದರಿ ಮಗುವನ್ನು ಹಿಂದಕ್ಕೆ ಎಳೆಯುವ ಸಂದರ್ಭವೂ ತಾಲೂಕಿನಲ್ಲಿದೆ. ಶಿರಸಿಯಲ್ಲೇ ಐಐಟಿ ತರಬೇತಿ ಕೇಂದ್ರ ಸ್ಥಾಪನೆಯಾಗುವಂತಾಗಲಿ. – ಗಣಪತಿ ಹೆಗಡೆ ಬಿಸಲಕೊಪ್ಪ ಪಾಲಕ