ವಿಜಯಪುರ: ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡುವುದರ ಜೊತೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಚಂಡಮಾರುತ ಹಿನ್ನೆಲೆ ಏರಿಕೆಯಾಗಿದ್ದ ಉಷ್ಣಾಂಶದಲ್ಲಿ ಏಕಾಏಕಿ ಕುಸಿತ ಕಾಣುತ್ತಿದೆ. ಶುಕ್ರವಾರ ಏಕಾಏಕಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಶನಿವಾರ ಕೂಡ ಶೀತಗಾಳಿ ಬೀಸಲಿದ್ದು, ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಕಾಯಿಲೆಗಳಿಂದ ಮುಕ್ತರಾಗಲು ಕೆಲವು ಸಲಹೆ ಸೂಚನೆ ಪಾಲಿಸುವ ಅಗತ್ಯವಿದ್ದು, ತನ್ನಿಮಿತ್ತ ಹವಾಮಾನ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಕ್ಷಣ ಕ್ಷಣವೂ ಹವಾಮಾನ ವರದಿ ಆಲಿಸಬೇಕು. ಅಗತ್ಯ ಮುಂಜಾಗೃತೆ ವಹಿಸಬೇಕು. ಬೆಚ್ಚಗಿನ ಬಟ್ಟೆ ಧರಿಸುವುದು, ಜ್ವರ, ಮೂಗಿನ ರಕ್ತಸ್ರಾವ, ಶೀತ ಮತ್ತಿತರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಔಷಧ ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ಮುಂಜಾಗೃತೆ ಕ್ರಮಗಳ ಕುರಿತು ವೈದ್ಯರಿಂದ ಮಾಹಿತಿ ಪಡೆಯಬೇಕೆಂದು ತಿಳಿಸಲಾಗಿದೆ.
ಸಾಧ್ಯವಾದಷ್ಟು ಮನೆಯೊಳಗೆ ಇರಿ ಮತ್ತು ಶೀತಗಾಳಿಗೆ ಒಡ್ಡಿಕೊಳ್ಳುವುದರಿಂದ ಆದಷ್ಟು ತಪ್ಪಿಸಬೇಕು. ಅದಕ್ಕಾಗಿ ಪ್ರಯಾಣ ಕೂಡ ಕಡಿಮೆ ಮಾಡುವುದು ಒಳಿತು. ತಲೆ, ಕುತ್ತಿಗೆ, ಕೈ ಮತ್ತು ಕಾಲುಬೆರಳುಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಬಟ್ಟೆ ಧರಿಸಬೇಕು. ಕೈಗವಸುಗಳಿಗೆ ಆದ್ಯತೆ ನೀಡಬೇಕು. ದೇಹದ ಉಷ್ಣತೆಯ ಸಮತೋಲನ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಬೇಕು. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣು ಮತ್ತು ತರಕಾರಿ ಸೇವಿಸಬೇಕು. ಬಿಸಿ ದ್ರವಗಳನ್ನು ನಿಯಮಿತವಾಗಿ ಕುಡಿಯಬೇಕು ಎಂದು ತಿಳಿಸಲಾಗಿದೆಯಲ್ಲದೇ ವಿವಿಧ ಮುಂಜಾಗೃತ ಕ್ರಮಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಅಲ್ಲದೇ, ನಡುಗುವುದನ್ನು ನಿರ್ಲಕ್ಷಿಸಬೇಡಿ. ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಪ್ರಮುಖವಾದ ಮೊದಲ ಸಂಕೇತವಾಗಿದೆ ಮತ್ತು ತ್ವರಿತವಾಗಿ ಒಳಾಂಗಣಕ್ಕೆ ಮರಳಲು ಸಂಕೇತವಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಜಾನುವಾರುವಿನ ರಕ್ಷಣೆಗೂ ಆದ್ಯತೆ ನೀಡಲು ತಿಳಿಸಲಾಗಿದೆ.
ಮದ್ಯಪಾನ ಮಾಡಬೇಡಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ, ವಾಸ್ತವವಾಗಿ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ.