More

    ಶ್ರೀಮಂತರ, ಜನಪ್ರತಿನಿಧಿಗಳ ಮನೆ ಬಾಗಿಲು ತನಕವೂ ಸುಸಜ್ಜಿತ ಮಾಡಲಾಗುತ್ತದೆ. ಆದರೆ ಕಮಲಶಿಲೆ ಹಾಗೂ ಹೊಸಂಗಡಿ ಬೆಸೆಯುವ ರಸ್ತೆ ಹಾಗೂ ಮುರಿದ ಸೇತುವೆ ಬೆಸೆಯುವುದೆಂದು?: ನಾಗರಿಕರ ಪ್ರಶ್ನೆ

    ಕುಂದಾಪುರ: ಕೋಟಿ ರೂಪಾಯಿ ಅನುದಾನದಲ್ಲಿ ಚತುಷ್ಪಥ ಪೇವರ್ ಫಿನಿಷ್ ರಸ್ತೆ ನಿರ್ಮಿಸುತ್ತಾರೆ. ಶ್ರೀಮಂತರ, ಜನಪ್ರತಿನಿಧಿಗಳ ಮನೆ ಬಾಗಿಲು ತನಕವೂ ಸುಸಜ್ಜಿತ ಮಾಡಲಾಗುತ್ತದೆ. ಆದರೆ ಕಮಲಶಿಲೆ ಹಾಗೂ ಹೊಸಂಗಡಿ ಬೆಸೆಯುವ ರಸ್ತೆ ಹಾಗೂ ಮುರಿದ ಸೇತುವೆ ಉದ್ಧಾರ ಆಗುತ್ತಿಲ್ಲ. ಅತಿ ಹೆಚ್ಚು ಎಸ್‌ಸಿ ಎಸ್‌ಟಿ ಜನರೇ ಇಲ್ಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ, ಜಾತಿಯ ಅಭಿವೃದ್ಧಿಗಾಗಿ ಇರಿಸಿದ ಅನುದಾನ ಎಲ್ಲಿಗೆ ಹೋಗುತ್ತದೆ ? ..ಹೀಗೆ ಪ್ರಶ್ನಿಸುತ್ತಾರೆ ಬೈಂದೂರು ತಾಲೂಕು ಯಡಮೊಗೆ ಗ್ರಾಮ ಜಂಬೆಹಾಡಿ ಹೊಸಬಾಳು ನಾಗರಿಕರು.

    ಕಮಲಶಿಲೆ ಹಾಗೂ ಹೊಸಂಗಡಿ ಬೆಸೆಯುವ ರಸ್ತೆ ಸಂಪರ್ಕಕ್ಕಾಗಿ ಹೊಸಬಾಳು ಜಂಬೆಹಾಡಿಯಲ್ಲಿ ಕುಬ್ಜಾ ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಮೂರು ವರ್ಷ ಹಿಂದೆ ಸೇತುವೆ ಕುಸಿದಿದ್ದು, ಕಾಲು ನಡಿಗೆಯಲ್ಲಿಯೇ ಸಾಗಬೇಕು. ಸೇತುವೆ ನಿರ್ಮಿಸಿ, ರಸ್ತೆ ದುರಸ್ತಿ ಮಾಡಿ ಎಂದು ಮನವಿ ಮಾಡಿ, ಬೇಸತ್ತ ಸ್ಥಳೀಯರು ಬುಧವಾರ ಮರಿದ ಸೇತುವೆ ಮೇಲೆ ನಿಂತು ನಾವೇನು ಪಾಕಿಸ್ತಾನದವರಲ್ಲ. ಯಡಮೊಗೆ ಭಾರತದಲ್ಲೇ ಇದೆ. ನಮಗೂ ಬದುಕುವ ಹಕ್ಕಿದ್ದು, ರಸ್ತೆ ದುರಸ್ತಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದರು. ಮೂರು ವರ್ಷದ ಹಿಂದೆ ಸೇತುವೆ ಮುರಿಯಿತು. ಅಂದಿನಿಂದ ಇಂದಿನವರೆಗೆ ನಾವು ಮನವಿ ಕೊಟ್ಟು ಸುಸ್ತಾಗಿದ್ದೇವೆ. ಜನಪ್ರತಿನಿಧಿಗಳು ಅನುದಾನ ಕಾದಿರಿಸಿದ್ದೇವೆ.. ಶಿಲಾನ್ಯಾಸ, ಗುದ್ದಲಿ ಪೂಜೆ ಶೀಘ್ರ ನಡೆಯುತ್ತದೆ ಎಂಬ ಭರವಸೆ ನೀಡುತ್ತಾ ಬಂದಿದ್ದರೂ, ಸೇತುವೆಯೂ ಆಗಿಲ್ಲ. ರಸ್ತೆಯೂ ಉದ್ಧಾರವಾಗಿಲ್ಲ. ಕಾಲಮಿತಿಯೊಳಗೆ ಸೇತುವೆ ಕಾಮಗಾರಿ ಆರಂಭಿಸಬೇಕು. ರಸ್ತೆ ನವೀಕರಿಸಬೇಕು. ಇಲ್ಲದಿದ್ದರೆ ಊರವರ ಜತೆ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕೂರುತ್ತೇವೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಕೆ.ಆನಂದ ಕಾರೂರು ಎಚ್ಚರಿಸಿದ್ದಾರೆ. ಹೊಸಬಾಳು ಸೇತುವೆ ಅವ್ಯವಸ್ಥೆ ಬಗ್ಗೆ ವಿಜಯವಾಣಿಯೂ ವಿಶೇಷ ವರದಿ ಮೂಲಕ ಎಚ್ಚರಿಸಿತ್ತು.

    ಕಲ್ಲು ಸಾಗಾಟದಿಂದ ಸೇತುವೆ, ರಸ್ತೆ ಹಾಳು: ಕಮಶಿಲೆಯಿಂದ ಯಡಮೊಗೆ ಮೂಲಕ ಹೊಸಂಗಡಿ ಸೇರುವುದು ಎಂದರೆ ಪರ್ವತಾರೋಹಣ ಮಾಡಿದಂತೆ. ಎರಡು ದಶಕದ ಹಿಂದೆ ರಸ್ತೆ ಡಾಂಬರು ಕಂಡಿದ್ದು, ಆ ಬಳಿಕ ನಿರ್ವಹಣೆ ಮಾಡಿಲ್ಲ. ರಸ್ತೆಯಲ್ಲಿ ಚರಂಡಿ ಇದೆಯೋ, ರಸ್ತೆಯೇ ಚರಂಡಿಯೂ, ಗದ್ದೆಯೋ ಎನ್ನುವಷ್ಟು ಗೊಂದಲ ಮೂಡಿಸುತ್ತದೆ. ರಸ್ತೆ – ಸೇತುವೆ ಹಾಳಾಗಲು ಅಕ್ರಮ ಕೆಂಪುಕಲ್ಲು ಗಣಿಗಾರಿಕೆಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ರಸ್ತೆಯಲ್ಲಿ ಭಾರ ಹೊತ್ತು ಸಾಗುವ ಲಾರಿಗಳು, ಟಿಪ್ಪರ್ ಓಡಾಟದಿಂದ ರಸ್ತೆ ಹದಗೆಟ್ಟಿದ್ದರೆ, ಸೇತುವೆ ಕುಸಿದಿದೆ. ಇನ್ನೆರಡು ಸೇತುವೆ ಕೂಡ ಈಗಲೋ ಆಗಲೋ ಎನ್ನುವ ಸ್ಥಿತಿಯಲ್ಲಿವೆೆ. ಯಡಮೊಗೆ ಪಶ್ಚಿಮ ಘಟ್ಟದ ಸೂಕ್ಷ್ಮಪ್ರದೇಶವಾಗಿದ್ದು, ಘಟ್ಟದ ಬುಡದಲ್ಲಿ ಗಣಿಗಾರಿಕೆ ನಡೆಸುವುದರಿಂದ ಘಟ್ಟಕ್ಕೂ ಅಪಾಯ ಕಾದಿದೆ. ಗಣಿ ಇಲಾಖೆ ಯಡಮೊಗೆ ಅಕ್ರಮ ಕೆಂಪುಕಲ್ಲು ಗಣಿಗೆ ಕಡಿವಾಣ ಹಾಕದಿದ್ದರೆ, ಊರು ಹಾಳಾಗುವ ಜತೆ ಪರಿಸರ ನಾಶವೂ ಆಗುತ್ತದೆ. ನಕ್ಸಲ್ ಪೀಡಿತ ಪ್ರದೇಶವಾಗಿದ್ದರಿಂದ ನಕ್ಸಲ್ ಪ್ಯಾಕೇಜ್‌ನಲ್ಲಾದರೂ ರಸ್ತೆ ಸೇತುವೆ ಅಭಿವೃದ್ಧಿ ಪಡಿಸಿಬೇಕು ಎನ್ನುವುದು ನಾಗರಿಕರ ಒತ್ತಾಯ.

    ಹೊಸಬಾಳು ಸೇತುವೆ ಪ್ರಕ್ರಿಯೆ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳ ಜೊತೆ ಮಾತನಾಡಿ ಏನಾಗಿದೆ ಎನ್ನುವುದ ಪರಿಶೀಲಿಸಲಾಗುತ್ತದೆ.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಯಡಮೊಗೆ ಜಂಬೆಹಾಡಿ ರಸ್ತೆ ಸಂಚಾರ ಕಷ್ಟ, ಸೇತುವೆಯೂ ಕುಸಿದಿದೆ. ರಸ್ತೆ ಆದ ನಂತರ ನವೀಕರಣವಿರಲಿ, ಪ್ಯಾಚ್ ವರ್ಕ್ ಕೂಡ ಮಾಡದೆ, ರಸ್ತೆ, ಚರಂಡಿ ಒಟ್ಟಾಗಿದ್ದು, ಮಳೆಗಾಲದಲ್ಲಿ ಸಂಚಾರ ಕಷ್ಟ. ಇಲ್ಲಿಂದ 100 ಮಕ್ಕಳು ಶಾಲೆಗೆ ಹೋಗುತ್ತಿದ್ದು, ಸೇತುವೆ ಕುಸಿದಿದ್ದರಿಂದ ನಾಲ್ಕಾರು ಕಿಲೋ ಮೀಟರ್ ನಡೆದು ಹೋಗಬೇಕು. ಯಡಮೊಗೆ ಏನು ಪಾಕಿಸ್ತಾನದಲ್ಲಿದೆಯೇ? ಅತಿ ಹೆಚ್ಚು ಎಸ್ಸಿಎಸ್ಟಿ ಇರುವ ಯಡಮೋಗೆಗೇಕೆ ರಸ್ತೆಯಾಗಲೀ ಸೇತುವೆಯಾಗಲಿ ಆಗುತ್ತಿಲ್ಲ.
    -ರಮೇಶ್ ನಾಯ್ಕ, ರಾಮ್‌ಪೈಜೆಡ್ಡು ಯಡಮೊಗೆ

    ಮೂರು ವರ್ಷದಿಂದ ಸೇತುವೆಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೂ ಸೇತುವೆ ಆಗದಿರುವುದು ಬೇಸರದ ಸಂಗತಿ. ಸೇತುವೆ ಹಾಗೂ ರಸ್ತೆ ದುರಸ್ತಿಗೆ ಗ್ರಾಪಂ ಅನುದಾನ ಸಾಲದಿರುವುದು ನಮ್ಮ ಕೈಕಟ್ಟಿಹಾಕಿದೆ. ನಮಗೆ ರಾಜಕೀಯ ಬೇಡ. ಯಾರಾದರೂ ಅಡ್ಡಿಯಿಲ್ಲ. ನಮ್ಮೂರಿನ ಸೇತುವೆ ಹಾಗೂ ರಸ್ತೆ ದುರಸ್ತಿ ಮೂಲಕ ಸಹಕಾರ ನೀಡಬೇಕು. ಮೊದಲೇ ನಕ್ಸಲ್ ಸಮಸ್ಯೆಯಿಂದ ನಾವು ಬಳಲುತ್ತಿದ್ದು, ಮತ್ತಷ್ಟು ಸಮಸ್ಯೆ ಮಾಡುವುದು ತರವಲ್ಲ. ಕಾಲಮಿತಿಯಲ್ಲಿ ಸೇತುವೆ ಕೆಲಸ ಆರಂಭಿಸದಿದ್ದರೆ ಊರವರ ಸಹಕಾರದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಧರಣಿ ಕೂರುತ್ತೇವೆ.
    -ಗುಂಡು ಶೆಟ್ಟಿ, ಸದಸ್ಯ, ಯಡಮೊಗೆ ಗ್ರಾಮ ಪಂಚಾಯಿತಿ

    ಸೇತುವೆ ಕುಸಿದಿದ್ದರಿಂದ ಶಾಲಾ ಮಕ್ಕಳು ಜಂಬೆಹಾಡಿಯಿಂದ ಹೊಸಂಗಡಿ ತನಕ ನಡೆದುಕೊಂಡು ಹೋಗಿ ಬಸ್ ಹಿಡಿದು, ಸಂಜೆ ಹೊಸಂಗಡಿಯಿಂದ ಕಾಲುನಡಿಗೆಯಲ್ಲಿ ಮನೆಗೆ ಬರಬೇಕು. ನಡೆದುಕೊಂಡು ಹೋಗ ಬೇಕಾಗಿರುವುದರಿಂದ ಮಕ್ಕಳು ಬೆಳಗ್ಗೆ ಬೇಗ ಏಳಬೇಕಿದ್ದು, ಸಂಜೆ ಮನೆ ಸೇರುವುದು ತಡವಾಗಿತ್ತದೆ. ನಡೆದು ಸುಸ್ತಾಗಿ ಮಕ್ಕಳು ಮನೆಗೆ ಬರುವುದರಿಂದ ಓದಿಗೆ ಗಮನ ಕೊಡುವುದು ಕಷ್ಟವಾಗಿ ಮಕ್ಕಳ ಭವಿಷ್ಯ ಹಾಳಾಗುತ್ತದೆ. ತಕ್ಷಣ ಸೇತುವೆ ಮಾಡಿ, ನಮ್ಮ ಸಮಸ್ಯೆ ಪರಿಹಾರ ಮಾಡಬೇಕು.
    -ಶ್ರೀಮತಿ ಜಂಬೆಹಾಡಿ, ಯಡಮೊಗೆ

    ಸೇತುವೆ ಮುರಿದ ನಂತರ ನಾವು ಪಟ್ಟ ಪರಿಪಾಟಲು ಹೇಳತೀರದು. ಮಕ್ಕಳ ಶಾಲೆಗೆ ಕಳುಹಿಸಿ ಸಂಜೆ ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕಾದು ಕೂರಬೇಕು. ಕಾಡುದಾರಿಯಲ್ಲಿ ಮಕ್ಕಳು ನಡೆದು ಬರುವುದು ಅಪಾಯವಾಗಿದ್ದು, ಮಕ್ಕಳು ಮನೆಗೆ ಬರುವುದು ಕೊಂಚ ತಡವದರೂ ದುಗುಡ ಹೆಚ್ಚಾಗುತ್ತದೆ.
    ಶಾರದಾ ಹೊಸಬಾಳು, ಹಿರಿಯ ಗೃಹಿಣಿ, ಹೊಸಬಾಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts