17ರಂದು ಪಿಯು ಫಲಿತಾಂಶ ಪ್ರಕಟ: ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಆರಂಭ

ಬೆಂಗಳೂರು: 2019ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ವಾರದೊಳಗೆ ಪ್ರಕಟವಾಗಲಿದೆ. ಇದೇ ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಇಟಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸುತ್ತಿರುವುದರಿಂದ ಏ.17ರಂದು ಪ್ರಕಟವಾಗುವುದು ಖಚಿತವಾಗಿದೆ.

ಸಿಇಟಿ ಏ.29ರಿಂದ ಮೇ 1ರವರೆಗೆ ನಡೆಯಲಿದೆ. ಪಿಯುನಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡಿರುವ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಬರೆಯುವುದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಿ ನಿರಾಳವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಪಿಯು ಫಲಿತಾಂಶವನ್ನು ಶೀಘ್ರ ಪ್ರಕಟಿಸಲು ತೀರ್ವನಿಸಲಾಗಿದೆ. ಪಿಯು ಇಲಾಖೆ ನಿರ್ದೇಶಕರಾಗಿದ್ದ ಪಿ.ಸಿ. ಜಾಫರ್ ದ್ವಿತೀಯ ಪಿಯು ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದರು.

ಇದರ ಪರಿಣಾಮ ಪಿಯು ಮೌಲ್ಯಮಾಪನ ಶೇ.90 ಮುಗಿದಿದೆ. ಫಲಿತಾಂಶ ಬಿಡುಗಡೆ ಮಾಡುವ ಪ್ರಕ್ರಿಯೆಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಪಿಯು ಇಲಾಖೆಗೆ ಕೆಲ ದಿನಗಳ ಅವಶ್ಯಕತೆ ಇರುವುದರಿಂದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸಲಿದೆ. ಈ ವರ್ಷ ಮೌಲ್ಯಮಾಪಕರು ಅಂಕಗಳನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಿರುವುದರಿಂದ ಫಲಿತಾಂಶದ ಸಿದ್ಧತೆ ಕೆಲಸ ಪಿಯು ಇಲಾಖೆಗೆ ಸರಳವಾಗಿದೆ. ಬುಧವಾರ ಪಿಯು ನಿರ್ದೇಶಕರಾಗಿ ಸಿ.ಶಿಖಾ ಅಧಿಕಾರವಹಿಸಿಕೊಂಡಿದ್ದು, ಫಲಿತಾಂಶ ಪ್ರಕಟಣೆಗೆ ಸಿದ್ಧತೆ ಆರಂಭಿಸಿದ್ದಾರೆ. 2019ನೇ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಅನುಕೂಲ: ಸಿಇಟಿ ಮೊದಲಿಗೆ ಪಿಯು ಫಲಿತಾಂಶ ಪ್ರಕಟವಾಗುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಪಿಯುನಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಅನುಕೂಲವಾಗಲಿದೆ. ಸಿಇಟಿ ಫಲಿತಾಂಶದ ವೇಳೆ ಶೇ.50 ಪಿಯು ಮತ್ತು ಶೇ.50 ಸಿಇಟಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಈ ವರ್ಷ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.

ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಆರಂಭ

ಬೆಂಗಳೂರು: ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಮೊದಲ ದಿನವೇ 14 ಸಾವಿರ ಮೌಲ್ಯಮಾಪಕರು ಗೈರಾಗಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಚುನಾವಣೆ ಕಾರ್ಯದಲ್ಲಿದ್ದ ಕಾರಣ ಗುರುವಾರದಿಂದ ಮೌಲ್ಯಮಾಪನ ಆರಂಭವಾಗಲಿದೆ. 69 ಸಾವಿರ ಮೌಲ್ಯಮಾಪಕರನ್ನು ಮೌಲ್ಯಮಾಪನಕ್ಕೆ ಗುರುತಿಸಲಾಗಿತ್ತು. ಇದರಲ್ಲಿ ಬುಧವಾರ 55,000 ಮೌಲ್ಯಮಾಪಕರು ಹಾಜರಾಗಿದ್ದಾರೆ. ಗೈರಾದ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ಗುರುವಾರ ಹಾಜರಾಗದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದೆ. ಈ ವರ್ಷ ಮೌಲ್ಯಮಾಪನ ಅಂಕಗಳನ್ನು ಆನ್​ಲೈನ್​ನಲ್ಲಿ ನಮೂದಿಸುತ್ತಿರುವುದರಿಂದ ಮೌಲ್ಯಮಾಪಕರಿಗೆ ಹೆಚ್ಚಿನ ತಲೆಬಿಸಿ ಇಲ್ಲ. ಹೀಗಾಗಿ ಮೌಲ್ಯಮಾಪನ ಕಾರ್ಯದ ವೇಗ ಕೂಡ ಹೆಚ್ಚಲಿದೆ. ಲೋಕಸಭಾ ಚುನಾವಣೆ ಅಡ್ಡಿ ಬರುವುದರಿಂದ ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾಗಲಿದೆ.

4 Replies to “17ರಂದು ಪಿಯು ಫಲಿತಾಂಶ ಪ್ರಕಟ: ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಆರಂಭ”

Comments are closed.