ಜಿಲ್ಲೆಯಲ್ಲಿ ಪಿಯು ಫಲಿತಾಂಶ ಏರಿಕೆ

ಮೈಸೂರು: ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಕೊಂಚ ಏರಿಕೆ(ಶೇ.0.85)ಕಂಡಿದ್ದು, ಸಾಧನೆ ಮಾತ್ರ ತೃಪ್ತಿಕರವಾಗಿಲ್ಲ.

2018-19ನೇ ಸಾಲಿನ ಫಲಿತಾಂಶವು ಶೇ.68.55ರಷ್ಟಾಗಿದ್ದು, ಜಿಲ್ಲಾವಾರು ಪಟ್ಟಿಯಲ್ಲಿ ಮೈಸೂರು 15ನೇ ಸ್ಥಾನ ಪಡೆದುಕೊಂಡಿದೆ. ಪಕ್ಕದ ಜಿಲ್ಲೆಯಾದ ಹಾಸನ(75.19), ಬಾಗಲಕೋಟೆ(74.26), ಚಾಮರಾಜನಗರ(72.67), ವಿಜಯಪುರ(68.55)ಕ್ಕಿಂತ ಮೈಸೂರು ಹಿಂದೆ ಉಳಿದಿರುವುದು ದುರಂತವೇ ಸರಿ…!

ಕಳೆದ 2017-18ನೇ ಸಾಲಿಗಿಂತ ಶೇ.0.85ರಷ್ಟು ಫಲಿತಾಂಶ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ಶೇ.67.07 ರಷ್ಟು ಫಲಿತಾಂಶವಾಗಿ ಜಿಲ್ಲೆ ಜಿಲ್ಲಾವಾರು ಪಟ್ಟಿಯಲ್ಲಿ 17ನೇ ಸ್ಥಾನ ಗಳಿಸಿತ್ತು.

ಪರೀಕ್ಷೆ ಬರೆದ 28,595 ಹೊಸಬರ ಪೈಕಿ 19,601 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.68.55ರಷ್ಟು ಹೊಸಬರು ಪಾಸಾಗಿದ್ದಾರೆ. ಇವರನ್ನು ಆಧರಿಸಿ ಜಿಲ್ಲೆಯ ಸಮಗ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಉಳಿದಂತೆ 1,413 ಖಾಸಗಿ ಅಭ್ಯರ್ಥಿಗಳಲ್ಲಿ 372 ಮತ್ತು 4,497 ಪುನರಾವರ್ತಿತರಲ್ಲಿ 1,287 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರ ಸಾಧನೆ ಕ್ರಮವಾಗಿ ಶೇ.26.33 ಮತ್ತು ಶೇ.28.62ರಷ್ಟಾಗಿದೆ. ಹೊಸಬರು, ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳು ಸೇರಿಸಿ 34,505 ವಿದ್ಯಾರ್ಥಿಗಳಲ್ಲಿ 21,260 ತೇರ್ಗಡೆಯಾಗಿ ಒಟ್ಟಾರೆ ಶೇ.61.61ರಷ್ಟು ಫಲಿತಾಂಶವಾಗಿದೆ.

ಹೆಣ್ಣು ಮಕ್ಳೇ ಸ್ಟ್ರಾಂಗು ಗುರು: ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 17,741ರಲ್ಲಿ 12,342 ಯುವತಿಯರು ಪಾಸಾಗಿದ್ದು, ಶೇ.69.57ರಷ್ಟು ಹೆಣ್ಣು ಮಕ್ಕಳು ಮುಂದಿನ ಶೈಕ್ಷಣಿಕ ಸುತ್ತಿಗೆ ಅರ್ಹತೆ ಪಡೆಯುವ ಮೂಲಕ ನಾವುಗಳೇ ಸ್ಟ್ರಾಂಗು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಬಾರಿಯೂ ಹುಡುಗಿಯರಿಗಿಂತ ಹಿಂದುಳಿದಿರುವ ಹುಡುಗರ ಫಲಿಶಾಂಶ ಶೇ.53.2ರಷ್ಟಾಗಿದೆ. 16,764ರಲ್ಲಿ 8,918 ಹುಡುಗರು ಪಾಸಾಗಿದ್ದಾರೆ.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಿಂದೆ: ಶೇ.65.83ರಷ್ಟು ಫಲಿತಾಂಶದೊಂದಿಗೆ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳೇ ಮುಂದಿದ್ದಾರೆ. 19,489ರಲ್ಲಿ 12,829ರಷ್ಟು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 15,016 ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ 8,431 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.56.15ರಷ್ಟು ಕಳಪೆ ಸಾಧನೆ ಮಾಡಿದ್ದಾರೆ.

ಅರ್ಧದಷ್ಟು ಕಲಾ ವಿದ್ಯಾರ್ಥಿಗಳು ಫೇಲು: ವಾಣಿಜ್ಯ ವಿಭಾಗದಿಂದಲೇ ಉತ್ತಮ ಸಾಧನೆ ಬಂದಿದೆ. 12,881 ವಾಣಿಜ್ಯ ವಿದ್ಯಾರ್ಥಿಗಳಲ್ಲಿ 8,696 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.67.51ರಷ್ಟು ಫಲಿತಾಂಶ ನೀಡಿದ್ದಾರೆ.
ನಂತರ ಸ್ಥಾನದಲ್ಲಿರುವ ವಿಜ್ಞಾನ ವಿದ್ಯಾರ್ಥಿಗಳು ಶೇ.64.8ರಷ್ಟು ಸಾಧನೆ ಮಾಡಿದ್ದು, 12,061 ವಿಜ್ಞಾನ ವಿದ್ಯಾರ್ಥಿಗಳಲ್ಲಿ 7,816 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳಪೆ ಸಾಧನೆ ಮಾಡಿರುವ ಕಲಾ ವಿಭಾಗದ ಫಲಿತಾಂಶ ಶೇ.49.65ರಷ್ಟಿದೆ. 9,563 ಕಲಾ ವಿದ್ಯಾರ್ಥಿಗಳಲ್ಲಿ 4748 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದು, ಅರ್ಧದಷ್ಟು ಕಲಾ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಕೇವಲ ಶೇ.54.46ರಷ್ಟು ತೇರ್ಗಡೆಯಾಗಿರುವ ಹಳ್ಳಿ ವಿದ್ಯಾರ್ಥಿಗಳ ಸಾಧನೆ ಕೂಡ ಕಳಪೆಯಾಗಿದೆ. 5,053 ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ 2,752 ಅಭ್ಯರ್ಥಿಗಳು ಮಾತ್ರ ಪಾಸಾಗಿದ್ದಾರೆ. ಈ ಸಲವೂ ಮುಂದಿರುವ ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಶೇ.62.84ರಷ್ಟಿದೆ. 29,452 ನಗರ ಹುಡುಗರಲ್ಲಿ 18,508 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಹಳ್ಳಿ ಹೈದರು ಮುಂಚೂಣಿಯಲ್ಲಿದ್ದರು.

ಜಾತಿವಾರು ಫಲಿತಾಂಶ: ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಇವರ ಫಲಿತಾಂಶ ಶೇ.70ರಷ್ಟಿದೆ. ಶೇ.54.03- ಎಸ್‌ಸಿ, ಶೇ.59.05- ಎಸ್‌ಟಿ, ಶೇ.61.54-ಒಬಿಸಿ ಪ್ರವರ್ಗ 1, ಶೇ.61.55- ಪ್ರವರ್ಗ 2ಎ, ಶೇ.57.78-ಪ್ರವರ್ಗ 2ಬಿ, ಶೇ.66.24- ಪ್ರವರ್ಗ 3ಎ, ಶೇ.66.27- ಪ್ರವರ್ಗ 3ಬಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಗುರಿ ಮುಟ್ಟಲು ಜಿಲ್ಲೆ ವಿಫಲ: ಪಿಯುಸಿ ಫಲಿತಾಂಶದಲ್ಲಿ ರಾಜ್ಯದ ಅಗ್ರ 10ರ ಒಳಗೆ ಸ್ಥಾನ ಪಡೆಯಲು ಮೈಸೂರು ಜಿಲ್ಲೆ ವಿಫಲವಾಗಿದೆ. ಫಲಿತಾಂಶ ಏರಿಕೆಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಜಿಲ್ಲಾಮಟ್ಟದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳು ಫಲಕೊಟ್ಟಿಲ್ಲ.

‘ವಿಶ್ವಾಸ ಕಿರಣ’ ಕಾರ್ಯಕ್ರಮ ಹೆಸರಿನಲ್ಲಿ ರಜೆ ಕಾಲದಲ್ಲಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಿ ಕಲಾ ವಿಭಾಗದ ಫಲಿತಾಂಶವನ್ನು ವೃದ್ಧಿಸಲು ಪ್ರಯತ್ನಿಸಲಾಗಿತ್ತು. ಸರ್ಕಾರಿ, ಅನುದಾನಿತ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ನುರಿತ ಬೋಧಕರಿಂದ ವಿಶೇಷ ತರಗತಿ, ತಜ್ಞರ ಪಾಠಪ್ರವಚನದ ಸಿಡಿ ವಿತರಣೆ, ಕಂಪ್ಯೂಟರ್ ಮೂಲಕ ದೃಶ್ಯಾಧಾರಿತ ಬೋಧನೆ, ಹೆಚ್ಚುವರಿ ವಿಶೇಷ ತರಗತಿ, ಶೇ.75ರಷ್ಟು ಕಡ್ಡಾಯ ಹಾಜರಾತಿ ನಿಯಮದ ಮೂಲಕ ಮಕ್ಕಳು ಬೋಧನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಜತೆಗೆ, ಈ ಸಲ ಮೊದಲ ಬಾರಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಕೆ ಮಾಡಿಕೊಂಡ ವಾಣಿಜ್ಯ, ಅಕೌಂಟ್, ಅರ್ಥಶಾಸ್ತ್ರ ವಿಷಯಗಳ ಬೋಧಕರಿಗೆ ತರಬೇತಿ, ರ‌್ಯಾಂಕ್ ವಿದ್ಯಾರ್ಥಿಗಳನ್ನು ಮೈಸೂರಿಗೆ ಕರೆಸಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಸಂವಾದ ಮಾಡಲಾಗಿತ್ತು. ಇಷ್ಟೆಲ್ಲ ಪ್ರಯತ್ನದ ಬಳಿಕವೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗಲಿಲ್ಲ.

‘ಈ ಸಲ ಜಿಲ್ಲಾವಾರು ಪಟ್ಟಿಯಲ್ಲಿ 10-12 ಸ್ಥಾನದೊಳಗೆ ಜಿಲ್ಲೆ ಸ್ಥಾನ ಗಳಿಸುವ ಗುರಿ ಹೊಂದಿತ್ತು. ಆದರೆ, ಕಳೆದ ಬಾರಿಗಿಂತ ಕಡಿಮೆ ಸ್ಥಾನ ಪಡೆದಿಲ್ಲ ಎಂಬುವುದು ಸದ್ಯಕ್ಕೆ ಸಮಾಧಾನಕರ ಸಂಗತಿ. ಈ ಬಾರಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ಮೂಲಕ ಶೇಕಡಾ ನೂರಕ್ಕೆ ನೂರರಷ್ಟು ಕಾಪಿಗೆ ಅವಕಾಶ ನೀಡಿಲ್ಲ. ಈ ಬಾರಿಯ ಜೀವಶಾಸ್ತ್ರ(ಬಯಾಲಜಿ) ಪ್ರಶ್ನೆ ಪತ್ರಿಕೆ ಬಹಳ ಕಠಿಣವಾಗಿತ್ತು. ಕಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣವಾಗಿರುವುದು ಜಿಲ್ಲೆಯ ಒಟ್ಟಾರೆ ಫಲಿತಾಂಶ ಕಡಿಮೆಯಾಗಲು ಕಾರಣವಾಗಿದೆ. ಈ ಕುರಿತು ಅಧ್ಯಯನ ಮಾಡಿ ಯಾವ ಕಾಲೇಜುಗಳಲ್ಲಿ ಫಲಿತಾಂಶ ಇಳಿಕೆಯಾಗಿದೆ, ಎಲ್ಲಿ ವಿಫಲವಾಗಿದೆ ಎನ್ನುವುದನ್ನು ಪರಿಶೀಲಿಸಿ, ಅದನ್ನು ಸರಿಪಡಿಸಿಕೊಂಡು ಹಳೇ ಕಾರ್ಯಕ್ರಮ ಮುಂದುವರಿಸಲಾಗುವುದು’ ಎಂದು ಡಿಡಿಪಿಯು ದಯಾನಂದ್ ವಿಜಯವಾಣಿಗೆ ತಿಳಿಸಿದರು.