ಪಿಯು ಪರೀಕ್ಷೆ ಶುರು

ಬೆಂಗಳೂರು: 2019ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಶುಕ್ರವಾರ ರಾಜ್ಯದ 1013 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.

ಬೆಳಗ್ಗೆ 10.15ಕ್ಕೆ ಪರೀಕ್ಷೆ ಪ್ರಾರಂಭವಾಯಿತು. ಮೊದಲ ದಿನದ ಪರೀಕ್ಷೆ ಅರ್ಥಶಾಸ್ತ್ರ ಶೇ.94.9 ಮತ್ತು ಭೌತಶಾಸ್ತ್ರದ ಶೇ.98.2 ವಿದ್ಯಾರ್ಥಿಗಳು ಹಾಜರಾಗಿದ್ದರು.

ಇದರಲ್ಲಿ ಭೌತಶಾಸ್ತ್ರ 4654 ಮತ್ತು ಅರ್ಥಶಾಸ್ತ್ರ ಹೊಸ ಪಠ್ಯಕ್ರಮ-18,308, ಹಳೇ ಪಠ್ಯಕ್ರಮ- 2,781 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಇಬ್ಬರು ಡಿಬಾರ್ ಆಗಿದ್ದಾರೆ. ಪ್ರಶ್ನೆಪತ್ರಿಕೆ ಸರಬರಾಜಲ್ಲೂ ವಿಳಂಬವಾಗಿಲ್ಲ. ಆದರೆ, ಕೆಲವು ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋಗಿರುವುದು ತಿಳಿದು ಬಂದಿದೆ. ಅವರ ವಿರುದ್ಧ ಕ್ರಮ ಜರುಗಿಸಲಿದ್ದೇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಪಿ.ಸಿ.ಜಾಫರ್ ತಿಳಿಸಿದ್ದಾರೆ. ಬಹುತೇಕ ಪಾಲಕರು ಮತ್ತು ಮಕ್ಕಳು ಪರಿಕ್ಷಾ ಮುನ್ನಾದಿನವೇ ಪರೀಕ್ಷಾ ಕೇಂದ್ರವನ್ನು ನೋಡಿ ಕೊಂಡಿದ್ದರು.

ಪ್ರವೇಶ ಪತ್ರದ ಗಲಾಟೆ: ಗಾಂಧಿನಗರ ಆರ್ಯ ವಿದ್ಯಾಶಾಲಾ ಪಿಯು ಕಾಲೇಜಿನ ಅಂದಾಜು 20 ವಿದ್ಯಾರ್ಥಿಗಳು ಪ್ರವೇಶ ಪತ್ರವಿಲ್ಲದೆ ಪರೀಕ್ಷೆಗೆ ಹಾಜರಾಗದೆ ಇಲಾಖೆ ವಿರುದ್ಧ ಘೋಷಣೆ ಹಾಕಿದರು. ಹಾಜರಾತಿ ಕಡಿಮೆ ಇದೆ ಎಂಬ ನೆಪದಲ್ಲಿ ಪ್ರವೇಶ ಪತ್ರ ನಿರಾಕರಿಸಿದ್ದಾರೆ. ಆದರೆ, ನಾವೆಲ್ಲರೂ ತರಗತಿಗೆ ಬಂದಿದ್ದೇವೆ. ಸಿಸಿಟಿವಿಯಲ್ಲಿ ಪರಿಶೀಲಿಸಿ ಎಂದು ವಿದ್ಯಾರ್ಥಿಗಳು ಮಾಧ್ಯಮದವರ ಮುಂದೆ ಗೋಳಾಡಿದರು. ಪ್ರಾಂಶುಪಾಲರು ಪ್ರವೇಶ ಪತ್ರ ನೀಡುವುದಾಗಿ ಹೇಳಿ ಈಗ ಕಾಲೇಜಿಗೆ ಬಾರದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗವಿಕಲರ ಪರೀಕ್ಷೆ: ಬಿಇಎಸ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾಯು ಕ್ಷಯ ಎಂಬ ಕಾಯಿಲೆಗೆ ತುತ್ತಾಗಿರುವ ಕನ್ನಯ್ಯ ಎಂಬ ವಿದ್ಯಾರ್ಥಿ ಮಲಗಿಕೊಂಡೇ ಉತ್ತರ ಹೇಳುವ ಮೂಲಕ ಸಹಾಯಕರಿಂದ ಪರೀಕ್ಷೆ ಬರೆಸಿದ್ದಾರೆ. ಇದಕ್ಕಾಗಿ ಒಂದು ಗಂಟೆ ಹೆಚ್ಚುವರಿಯಾಗಿ ಅವಕಾಶ ನೀಡಲಾಗಿತ್ತು. ಎಸ್ಸೆಸ್ಸೆಲ್ಸಿಯಲ್ಲಿ ಇವರು ಶೇ.82 ಅಂಕಗಳಿಸಿದ್ದಾರೆ.

ತಾಯಿ-ಮಗಳ ಪರೀಕ್ಷೆ!

ಬಾಗಲಕೋಟೆಯ ಮುಧೋಳದ ಆರ್​ಎಂಜಿ ಪದವಿ ಪೂರ್ವ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಯಾಗಿ ಕವಯಿತ್ರಿ ವಿಜಯಲಕ್ಷ್ಮೀ ಕಗಲಗೊಂಬ ಕಲಾ ವಿಭಾಗದ ಮೊದಲ ಪತ್ರಿಕೆ ಅರ್ಥಶಾಸ್ತ್ರ ಪರೀಕ್ಷೆ ಬರೆದರೆ, ಮಗಳು ಐಶ್ವರ್ಯಾ ಕಗಲಗೊಂಬ ಬಾಗಲಕೋಟೆಯ ವಾಗ್ದೇವಿ ಪಿಯು ಕಾಲೇಜು ಕೇಂದ್ರದಲ್ಲಿ ಭೌತಶಾಸ್ತ್ರ ವಿಷಯ ಪರೀಕ್ಷೆ ಬರೆದರು.

ಅಂಧೆಗಿಲ್ಲ ಪ್ರವೇಶ

ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಎಸ್​ಎಂಸಿಕೆ ಕಾಲೇಜಿನ ಕಲಾ ವಿಭಾಗದ ಜಿ.ಸಿ. ನಮಿತಾ ಅಂಗವಿಕಲೆ (ಅಂಧತ್ವ) ಆಗಿದ್ದು, ಪ್ರತ್ಯೇಕ ಕೊಠಡಿ ಸಿಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.ಸಮರ್ಪಕ ದಾಖಲಾತಿ ಒದಗಿಸಿಲ್ಲ. ಆದ್ದರಿಂದ ಪ್ರತ್ಯೇಕ ಕೊಠಡಿಗೆ ಅವಕಾಶ ಕೊಟ್ಟಿಲ್ಲ ಎಂದು ಪಿಯು ಡಿಡಿಪಿಐ ಶೇಖರಪ್ಪ ಪ್ರತಿಕ್ರಿಯಿಸಿದ್ದಾರೆ.