ಆನ್​ಲೈನ್-ಆಫ್​ಲೈನಲ್ಲಿ ಪಿಯು ಮೌಲ್ಯಮಾಪನ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಅಂಕ ಎಣಿಕೆ ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಕಡೆ ನಡೆಯಲಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ಈ ವರ್ಷ ಒಎಂಆರ್ ಮತ್ತು ಆನ್​ಲೈನ್ ಎರಡೂ ಕಡೆ ಅಂಕಗಳನ್ನು ನಮೂದಿಸಬೇಕೆಂದು ಮೌಲ್ಯಮಾಪಕರಿಗೆ ಸೂಚನೆ ನೀಡಿದೆ. ಅಂಕಗಳ ವ್ಯತ್ಯಾಸ ಮತ್ತು ಎಣಿಕೆಯಲ್ಲಿ ಪಾರದರ್ಶಕತೆ ತರಲು ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಈ ಮಾದರಿಯನ್ನು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2018ನೇ ಸಾಲಿನ ಪೂರಕ ಪರೀಕ್ಷೆಯಲ್ಲಿ ಅನುಸರಿಸಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಇದೇ ಮಾದರಿಯನ್ನು ಪಿಯು ಪರೀಕ್ಷಾ ಮೌಲ್ಯಮಾಪನಕ್ಕೂ ಅಳವಡಿಸಿಕೊಳ್ಳಲು ಮುಂದಾಗಿದೆ.

ಪ್ರತಿ ಮೌಲ್ಯಮಾಪಕರಿಗೆ ಒಂದು ದಿನಕ್ಕೆ 48 ಉತ್ತರಪತ್ರಿಕೆಗಳನ್ನು ನೀಡಲಾಗುತ್ತದೆ. ಮೌಲ್ಯಮಾಪನದ ನಂತರ ಮೌಲ್ಯಮಾಪಕರು ಅಂಕಗಳನ್ನು ಆನ್​ಲೈನ್ ಮತ್ತು ಒಎಂಆರ್ ಶೀಟ್​ನಲ್ಲಿ ನಮೂದಿಸಬೇಕಿದೆ. ಇದು ಮೊದಲ ವರ್ಷವಾಗಿರುವುದರಿಂದ ಮೌಲ್ಯಮಾಪಕರು ಎರಡೂ ಕಡೆ ಅಂಕಗಳನ್ನು ನಮೂದಿಸಬೇಕಿದೆ. ಮುಂದಿನ ವರ್ಷದಿಂದ ಆನ್​ಲೈನ್​ನಲ್ಲೇ ಅಪ್​ಲೋಡ್ ಮಾಡುವುದು ಕಡ್ಡಾಯ ಆಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಹೇಗೆ ನಡೆಯಲಿದೆ?: ಮೌಲ್ಯಮಾಪಕರು ವಿದ್ಯಾರ್ಥಿಗಳ ಅಂಕಗಳನ್ನು ಆನ್​ಲೈನ್​ನಲ್ಲಿ ನಮೂದಿಸಬೇಕು. ಆನಂತರ ಉಪ ಮುಖ್ಯ ಮೌಲ್ಯಮಾಪಕರು ಒಮ್ಮೆ ಪರಿಶೀಲನೆ ನಡೆಸಲಿದ್ದಾರೆ. ಆದರೆ, ತಪ್ಪಿದ್ದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಇದನ್ನು ಸರಿಪಡಿಸುವಂತಿಲ್ಲ. ಮೌಲ್ಯಮಾಪಕರಿಗೆ ಮರು ಮೌಲ್ಯಮಾಪನಕ್ಕೆ ಕಳುಹಿಸಬೇಕು. ಆನಂತರ ಮೌಲ್ಯಮಾಪಕರೇ ಇದನ್ನು ಸರಿಪಡಿಸಬೇಕಿದೆ. ಇದನ್ನು ಅಂತಿಮವಾಗಿ ಫಲಿತಾಂಶ ಪ್ರಕಟಣೆಗೆ ಬಳಸಲಾಗುತ್ತದೆ.

ಪ್ರಾಯೋಗಿಕ ಅಂಕ ಆನ್​ಲೈನ್

ದ್ವಿತೀಯ ಪಿಯು ವಿಜ್ಞಾನ ವಿಷಯದ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನೇರವಾಗಿ ಆನ್​ಲೈನ್ ಮೂಲಕ ಅಪ್​ಲೋಡ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸ್ಟುಡೆಂಟ್ ಅಚೀವ್​ವೆುಂಟ್ ಟ್ರಾಕಿಂಗ್ ಸಿಸ್ಟಂ (ಎಸ್​ಎಟಿಎಸ್) ಮೂಲಕ ವಿದ್ಯಾರ್ಥಿಗಳ ಅಂಕಗಳನ್ನು ಅಪ್​ಲೋಡ್ ಮಾಡಬಹುದು.