ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಖರೀದಿ, ವಿಮೆ ಸೌಲಭ್ಯ ಹಾಗೂ ವಿದೇಶ ಪ್ರವಾಸ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ‘ಪೊಲೀಸ್ ಸ್ಯಾಲರಿ ಪ್ಯಾಕೇಜ್(ಪಿಎಸ್ಪಿ)’ ಜಾರಿಗೆ ತಂದಿದೆ.
ಎಸ್ಬಿಐ ಒದಗಿಸಿರುವ ‘ಪಿಎಸ್ಪಿ’ ವಿಶೇಷ ಪ್ಯಾಕೇಜ್ಗೆ ಪೊಲೀಸ್ ಇಲಾಖೆ ಸಹ ಒಪ್ಪಿಗೆ ನೀಡಿದ್ದು, ಸಹಿ ಹಾಕಿದೆ. ‘ಪಿಎಸ್ಪಿ’ ಸೌಲಭ್ಯ ಕುರಿತು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಗಮನಕ್ಕೆ ತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆಯಾ ಘಟಕ ಮತ್ತು ವಿಭಾಗದ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಪ್ಯಾಕೇಜ್ ಸ್ವ-ಇಚ್ಛೆ!: ಸೇವಾ ಹಿರಿತನದ ಮೇರೆಗೆ ‘ಪಿಎಸ್ಪಿ’ ಸೌಲಭ್ಯ ಸಿಗಲಿದೆ. ಪೇದೆ ಹುದ್ದೆಯಿಂದ ಡಿಐಜಿವರೆಗೂ ಸಿಲ್ವರ್, ಗೋಲ್ಡ್, ಡೈಮಂಡ್ ಹಾಗೂ ಪ್ಲಾಟಿನಂ ಎಂದು ವಿಂಗಡಿಸಿದೆ. ಎಸ್ಬಿಐ ಖಾತೆಯಿಂದ ವೇತನ ಪಡೆಯುತ್ತಿರುವವರು ‘ಪಿಎಸ್ಪಿ’ ಯೋಜನೆಗೆ ಜೋಡಿಸಲು ದಾಖಲೆ ಕೊಡಬೇಕು. ಎಸ್ಬಿಐನಲ್ಲಿ ಖಾತೆ ಹೊಂದಿಲ್ಲದವರು ‘ಪಿಎಸ್ಪಿ’ ಅಡಿ ಹೊಸ ಖಾತೆ ತೆರೆಯಬೇಕು. ಈ ಸೌಲಭ್ಯ ಒತ್ತಾಯಪೂರ್ವಕವಲ್ಲ, ಅವರ ಇಚ್ಛೆಗೆ ಬಿಟ್ಟದ್ದು. ಈ ಕುರಿತು ಆಯಾ ವಲಯ ಮತ್ತು ವಿಭಾಗದ ಮುಖ್ಯಸ್ಥರು ಅಧೀನದಲ್ಲಿ ಬರುವ ಎಲ್ಲ ಸಿಬ್ಬಂದಿ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.
ಸಿಗುವ ಸೌಲಭ್ಯಗಳೇನು?
- ರಾಜ್ಯದ ಯಾವುದೇ ಎಸ್ಬಿಐ ಶಾಖೆಯಿಂದ ವಹಿವಾಟು ಸೌಲಭ್ಯ.
- ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ.
- ವಾಹನ ಮತ್ತು ಗೃಹ ಸಾಲ.
- ಎಸ್ಬಿಐ ಎಟಿಎಂನಿಂದ ಅಪರಿಮಿತ ಸೇವೆ.
- ಯಾವುದೇ ಶಾಖೆಯಿಂದಲೂ ಚೆಕ್ನಿಂದ ಹಣ ಪಡೆಯಬಹುದಾಗ ಮಲ್ಟಿಸಿಟಿ ಚೆಕ್ ಸೌಲಭ್ಯ
- ಇಲಾಖೆ ಸೇವೆಯಲ್ಲಿ ವಿದೇಶಕ್ಕೆ ತೆರಳುವರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ.
- ವಿಶೇಷ ವಿಮಾ ಸೌಲಭ್ಯ.