ಬೆಂಗಳೂರು: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಮನಸ್ಸೊಂದಿದ್ದರೆ ಮಾರ್ಗವು ಮಾರ್ಗ ಉಂಟು ಕೆಚ್ಚೆದೆ ಇರಬೇಕೆಂದು, ಕೆಚ್ಚೆದೆ ಇರಬೇಕೆಂದೆಂದು…ಈ ಸಾಲುಗಳಿಂದ ಸ್ಫೂರ್ತಿಯಾಗಿ ಪಡೆದ ಪಿಎಸ್‌ಐ ಶಾಂತಪ್ಪ ಜಡಮ್ಮನರ್ ತಮ್ಮ ಸ್ವಂತ ಖರ್ಚಿನಲ್ಲೇ ಮೊಬೈಲ್ ಟಾಯ್ಲೆಟ್ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದಾರೆ.
ಗೊರಗುಂಟೆಪಾಳ್ಯದಲ್ಲಿ ಪಬ್ಲಿಕ್ ಟಾಯ್ಲೆಟ್‌ಗಾಗಿ ಪಿಎಸ್‌ಐ ಟ್ವಿಟರ್ ಅಭಿಯಾನವನ್ನು ಕೈಗೊಂಡಿದ್ದರು. ಈ ಬಗ್ಗೆ ವಿಜಯವಾಣಿ ಏ.19ರಂದು ಪಬ್ಲಿಕ್ ಟಾಯ್ಲೆಟ್‌ಗಾಗಿ ಎಸ್‌ಐ ಹೋರಾಟ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯೊಂದನ್ನು ಪ್ರಕಟಿಸಿ ಶಾಂತಪ್ಪನವರ ಸಮಾಜಮುಖಿ ಕಾರ್ಯಕ್ಕೆ ಬೆಂಬಲವಾಗಿ ನಿಂತಿತ್ತು.
ತಮ್ಮ ಅಭಿಯಾನಕ್ಕೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಲ್ಲದೆ ಅಭಿಯಾನ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮೊಬೈಲ್ ಟಾಯ್ಲೆಟ್ ಸಾಂಕೇತಿಕವಾಗಿ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದಾರೆ.
ಸದಾ ಜನಜಂಗುಳಿಯಿಂದ ಕೂಡಿದ ಪ್ರದೇಶವಾದ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಯಾರೊಬ್ಬರೂ ಸ್ಪಂದಿಸದಿದ್ದರಿಂದ ಪಿಎಸ್‌ಐ ಶಾಂತಪ್ಪ ತಮ್ಮ ಸ್ವಂತ ಖರ್ಚಿನಲ್ಲೇ ಮೊಬೈಲ್ ಟಾಯ್ಲೆಟ್ ಇರಿಸಿ ಬುಧವಾರ ಅದನ್ನು ತೃತೀಯ ಲಿಂಗಿ ಭವಾನಿ ಅವರಿಂದ ಉದ್ಘಾಟನೆ ಮಾಡಿಸಿದ್ದಾರೆ.
ಇಂದು ಉದ್ಘಾಟನೆ ಗೊಂಡಿರುವ ಮೊಬೈಲ್ ಶೌಚಗೃಹ ಸಾಂಕೇತಿಕವಾಗಿದೆ. ಈ ಭಾಗದಲ್ಲಿ ಶಾಶ್ವತ ಶೌಚಗೃಹ ಬರುವವರೆಗೂ ನನ್ನ ಟ್ವಿಟರ್ ಅಭಿಯಾನ ಮುಂದುವರಿಯಲಿದೆ.
| ಶಾಂತಪ್ಪ ಜಡಮ್ಮನರ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್
ತೃತೀಯ ಲಿಂಗಿಯಿಂದ ಉದ್ಘಾಟನೆ
ಗೊರಗುಂಟೆಪಾಳ್ಯದ ಬಸ್ ತಂಗುದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ಮೊಬೈಲ್ ಟಾಯ್ಲೆಟ್ ವಾಹನ ನಿಲ್ಲಿಸಲಾಗಿದ್ದು, ಬುಧವಾರ ಬೆಳಿಗ್ಗೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಯಿತು. ತಮ್ಮನ್ನು ದೂರವಿಡಲು ಇಚ್ಛಿಸುವವರ ಮಧ್ಯೆ, ಇಂಥ ಕೆಲಸಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಶಾಂತಪ್ಪ ಅವರಿಗೆ ಧನ್ಯವಾದ ಎಂದು ತೃತೀಯ ಲಿಂಗಿ ಭವಾನಿ ಭಾವುಕರಾದರು.
ಸ್ವಚ್ಛ ಭಾರತ ಅಭಿಯಾನ ಪ್ರೇರಣೆ
ಈ ವೇಳೆ ಪಿಎಸ್‌ಐ ಶಾಂತಪ್ಪ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಗೊರಗುಂಟೆಪಾಳ್ಯ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತವೆ. ಇಂತಹ ಗೊರಗುಂಟೆಪಾಳ್ಯದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಜನರ ಯಾತನೆ ಅನುಭವಿಸುತ್ತಿದ್ದರು. ಮಹಿಳೆಯರು, ವೃದ್ಧರು ಕಷ್ಟಪಡುತ್ತಿದ್ದರು. ಈ ಬಗ್ಗೆ ಸಮಸ್ಯೆ ನಿವಾರಿಸಲು ಹಲವು ಅಭಿಯಾನ ನಡೆಸಿದರೂ ಪ್ರಯೋಜನವಾಗಲಿಲ್ಲ. ಜತೆಗೆ ಜಾಗವಿದ್ದರೂ ಮೊಬೈಲ್ ಶೌಚಾಲಯ ಇರಿಸಲು ಬಿಬಿಎಂಪಿ ಆಸಕ್ತಿ ತೋರಲಿಲ್ಲ. ಹೀಗಾಗಿ, ನಾನು ಹಾಗೂ ಕೆಲ ಯುವಕರು ಸೇರಿ ಈ ಶೌಚಾಲಯ ಇರಿಸಿದ್ದೇವೆ. ಇದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ನನಗೆ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.
10 ಶೌಚಾಲಯ: ವಾಹನದಲ್ಲಿ ಒಟ್ಟು 10 ಶೌಚಾಲಯ ಇವೆ. 5 ಪುರುಷರದು, 3 ಮಹಿಳೆಯರದು, 2 ತೃತೀಯ ಲಿಂಗಿಗಳದ್ದು. ಇದಕ್ಕೆ ಬೇಕಾದ ನೀರಿನ ವ್ಯವಸ್ಥೆ ವಾಹನದಲ್ಲಿದೆ. ಎಲ್ಲವೂ ತುಂಬಿದ ನಂತರ, ವಿಲೇವಾರಿ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ. ಜತೆಗೆ ಇದನ್ನು ನಿರ್ವಹಣೆ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದ್ದಾರೆ.
ಗೆಲುವಿನ ಹುಮ್ಮಸ್ಸು ಉಕ್ಕೇರಿ, ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಹುಕ್ಕೇರಿ..