ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ: ಇಂದು ಇನ್ನೋರ್ವ ಆರೋಪಿ ಬಂಧನ

ಬೆಂಗಳೂರು: ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಇನ್ನೋರ್ವ ಆರೋಪಿ ಅನಿಲ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲು ಕಿಂಗ್​ಪಿನ್​ ಬಸವರಾಜ್​ನನ್ನು ಬಂಧಿಸಿದ್ದ ಪೊಲೀಸರು ಆತ ನೀಡಿದ್ದ ಮಾಹಿತಿಗಳ ಅನ್ವಯ ಇಂದು ಮಧ್ಯಾಹ್ನ 2 ಗಂಟೆಗೆ ಅನಿಲ್​ ಎಂಬಾತನನ್ನು ಕೂಡ ವಶಕ್ಕೆ ಪಡೆದಿದ್ದಾರೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್​ ಕೊಚ್ಚಿನ್​ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಕೊಚ್ಚಿನ್​ ಏರ್​ಪೋರ್ಟ್​ನಲ್ಲಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ಪೊಲೀಸ್​ ತಂಡ ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಬಂದಿದೆ. ಈತ ಪ್ರಶ್ನೆ ಪತ್ರಿಕೆ ತಂದು ಕೊಡುತ್ತಿದ್ದ ಎನ್ನಲಾಗಿದೆ.

ಅನಿಲ್​ ಮಣಿಪಾಲ್​ನಲ್ಲಿ ಕೆಲಸ ಮಾಡುತ್ತಿದ್ದ. ಜ.10ರಂದು ಕೆಲಸ ಹುಡುಕಿಕೊಂಡು ದುಬೈಗೆ ತೆರಳಿದ್ದ. ಆತ ಮಣಿಪಾಲ್​ನಲ್ಲಿ ಇದ್ದಾಗ ಅಲ್ಲಿಯೇ ಪ್ರಶ್ನೆ ಪತ್ರಿಕೆ ಜೆರಾಕ್ಸ್​ ಮಾಡಲಾಗುತ್ತಿತ್ತು. ಆಗ ಅನಿಲ್ ಜೆರಾಕ್ಸ್​ಗೆ ಬಂದ ಪ್ರಶ್ನೆ ಪತ್ರಿಕೆಗಳನ್ನು ಕಳವು ಮಾಡಿ ಶಿವಕುಮಾರಸ್ವಾಮಿ ಎಂಬಾತನ ಕೈಗೆ ಕೊಡುತ್ತಿದ್ದ. ಬಳಿಕ ಶಿವಕುಮಾರಸ್ವಾಮಿ ಅದನ್ನು ತಾನೇ ಸಿದ್ಧ ಪಡಿಸಿದ್ದಾಗಿ ಹೇಳಿಕೊಳ್ಳುತ್ತಿದ್ದ ಎಂದು ಈ ಮೊದಲು ಬಂಧಿತನಾದ ಆರೋಪಿ ಬಸವರಾಜ್​ ಪೊಲೀಸರಿಗೆ ತಿಳಿಸಿದ್ದಾರೆ.

ಬಸವರಾಜ್​ನಿಂದ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಅನಿಲ್​ ಹಿಂದೆ ಬಿದ್ದಿದ್ದರು. ಅನಿಲ್​ ಮನೆಯವರು ಆತ ದುಬೈಗೆ ತೆರಳಿದ್ದನ್ನು ತಿಳಿಸಿದ್ದರು.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬರೀ ಪಿಎಸ್​ಐ ಪರೀಕ್ಷೆ ಪತ್ರಿಕೆಯಲ್ಲ, ಬೇರೆ ಕೆಲವು ಪರೀಕ್ಷೆಗಳ ಪೇಪರ್​ಕೂಡ ಕಳವಾಗಿದೆ ಎಂಬ ಮಾಹಿತಿಯನ್ನು ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.