ಪಿಎಸ್‌ಐ, ಮುಖ್ಯಪೇದೆ ಅಮಾನತು

ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯ ಪಿಎಸ್‌ಐ ಸಿದ್ದೇಶ್ ಹಾಗೂ ಸರ್ಕಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಮುಖ್ಯಪೇದೆ ಜಿ.ಹನುಮಂತಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಪಿಎಸ್‌ಐ ವಿರುದ್ಧ ಹನುಮಂತಪ್ಪ ದೂರು ನೀಡಿದ್ದರು. ತಮ್ಮನ್ನು ಹನುಮಂತಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಸಿದ್ದೇಶ್ ಆರೋಪ ಮಾಡಿದ್ದರು.
ಹಲ್ಲೆ ಘಟನೆ ಹಿನ್ನೆಲೆಯಲ್ಲಿ ಹನುಮಂತಪ್ಪ ಪರವಾನಗಿ ಪಡೆಯದೇ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ಆ.17ರಂದು ರಾತ್ರಿ ಆಫೀಸರ್ಸ್ ಕ್ಲಬ್‌ಗೆ ಸಿದ್ದೇಶ್ ತಮ್ಮನ್ನು ಕರೆಸಿ ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ್ದರು ಎಂದು ಹನುಮಂತಪ್ಪ ಆ.19ರಂದು ಸುದ್ದಿಗೋಷ್ಠಿಯಲ್ಲಿ ಸಿದ್ದೇಶ್ ವಿರುದ್ಧ ದೂರಿದ್ದರು.