ಹಲಗೂರು: ಸರ್ಕಾರದಿಂದ ಯಾವುದೇ ಕೆಲಸಗಳು ನಿಮಗೆ ಸಿಗುವುದಿಲ್ಲ. ಹೈನುಗಾರಿಕೆ, ಟೈಲರಿಂಗ್ ಸೇರಿದಂತೆ ಇತರ ಯಾವುದಾದರೂ ವೃತ್ತಿಯನ್ನು ಆರಂಭಿಸಿಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳುವುದಾದರೆ ನಾನು ಸಹಕಾರ ನೀಡುವೆ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭರವಸೆ ನೀಡಿದರು.
ಕೊನ್ನಾಪುರ ಗ್ರಾಮದ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಾ ಮತ್ತು ರಂಜಿತ್ ಅವರ ನಿವಾಸಕ್ಕೆ ಭಾನುವಾರ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಅವರು ಮಾತನಾಡಿದರು.
ಮೃತ ಪ್ರೇಮಾ ಮಗಳು ಮಾತನಾಡಿ, ನಾವು ತುಂಬಾ ತೊಂದರೆಯಲ್ಲಿದ್ದೇವೆ. ಮನೆ ನಿರ್ಮಾಣ ಮತ್ತು ಕಷ್ಟಗಳನ್ನು ನಿವಾರಿಸಿಕೊಳ್ಳಲು ಮೈಕ್ರೋ ಫೈನಾನ್ಸ್‌ನಿಂದ ಸಾಲ ಮಾಡಿದ್ದೆವು. ಬಡ್ಡಿ ಜಾಸ್ತಿಯಾಗಿದ್ದರಿಂದ ಅವರು ಮನೆ ಹತ್ತಿರ ಬಂದು ಗಲಾಟೆ ಮಾಡಿ ಮನೆಯಿಂದ ಹೊರಗೆ ಕಳಿಸಿ ಬೀಗ ಹಾಕಿದರು. ಇದರಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡರು. ನಮ್ಮ ಅಣ್ಣ ರಂಜಿತ್ ತಾಯಿ ಮೇಲೆ ಅಪಾರ ಪ್ರೀತಿ ಇಟ್ಟಿದ್ದರಿಂದ ಮನನೊಂದು ಅವನೂ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಕುಟುಂಬಕ್ಕೆ ಆಧಾರ ಇಲ್ಲದಾಗಿದ್ದು, ಯಾವುದಾದರೂ ನೌಕರಿ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು, ನಾವು ಈಗ ಮಾಡುವ ಸಹಾಯ ಹೆಚ್ಚು ದಿನ ಬರುವುದಿಲ್ಲ. ನೀವು ಯಾವುದಾದರೂ ಸ್ವಯಂ ವೃತ್ತಿಯನ್ನು ಆರಂಭಿಸಿಕೊಂಡರೆ ನನ್ನಿಂದ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬಡ್ಡಿ ವ್ಯವಹಾರದ ಹಾವಳಿಯಿಂದ ಮಳವಳ್ಳಿ ತಾಲೂಕಿನಲ್ಲಿ ಎರಡು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ತಾಲೂಕಿನ ಮಲಿಯೂರು ಮತ್ತು ಕೊನ್ನಾಪುರ ಪ್ರಕರಣ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ತುಂಬಾ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿಯೊಡನೆ ದೂರವಾಣಿ ಮೂಲಕ ಮಾತನಾಡಿ, ಫೈನಾನ್ಸ್ ಕಂಪನಿಯ ಏಜೆನ್ಸಿಯವರ ಮನವೊಲಿಸಿ ಆಕೆಯ ಸಾಲ ಮನ್ನಾ ಮಾಡಿಸಿ, ಪರಿಹಾರ ನೀಡಲು ತಿಳಿಸಿದ್ದೇನೆ. ಜತೆಗೆ ಅಡಮಾನ ಇಟ್ಟ ಮನೆಯನ್ನು ಬಿಡಿಸಿದ್ದೇನೆ. ಇವೆಲ್ಲವನ್ನು ಮಾನವೀಯತೆ ದೃಷ್ಟಿಯಿಂದ ಮಾಡಿಸಿದ್ದೇನೆ. ಆಕೆಯ ಮಗನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಕುಟುಂಬದಲ್ಲಿ ದುಡಿಯುವವರು ಇಲ್ಲದ್ದರಿಂದ ಕುಟುಂಬದವರಿಗೆ ತುಂಬಾ ತೊಂದರೆ ಆಗಿದೆ. ಸ್ವಯಂವೃತ್ತಿ ಆರಂಭಿಸಿಕೊಳ್ಳಲು ಸಲಹೆ ನೀಡಿದ್ದೇನೆ. ಸ್ವಯಂವೃತ್ತಿ ಆರಂಭಿಸಿದರೆ ಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಸಾಲಗಾರರಿಗಾಗಿ ಏಕಾಏಕಿ ಕಾನೂನುಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೂ ಬಡಜನರ ರಕ್ಷಣೆಗಾಗಿ ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಸಂಬಂಧ ಸುಗ್ರಿವಾಜ್ಞೆ ಜಾರಿಗೆ ತರಲಾಗಿದ್ದು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಘನತೆ ಜೀವನ ನಡೆಸಿ ಎಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ಕುಂತೂರು ಗೋಪಾಲ್, ಚಂದ್ರಕುಮಾರ್, ಶ್ರೀನಿವಾಸಚಾರಿ, ಸಾಗ್ಯ ಕೆಂಪಯ್ಯ, ಎಚ್.ವಿ.ರಾಜಣ್ಣ, ರಾಮಲಿಂಗೇಗೌಡ , ಶಿವನಂಜೇಗೌಡ, ಕೆ.ಬಿ.ಜಯಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಮೀಲ್ ಪಾಷಾ, ಮರಿಸ್ವಾಮಿ, ಮಂಗಳಾ ಇದ್ದರು.