ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮೂಡಿಸಲು ಹಾಗೂ ನಾಗರಿಕರ ಅಹವಾಲು ಆಲಿಕೆಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆರ್.ಆರ್.ನಗರ ವಲಯದಲ್ಲಿ ಶುಕ್ರವಾರ ಕೈಗೊಂಡ ಸ್ಥಳಪರಿಶೀಲನೆ ವೇಳೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅವಕಾಶ ಉಂಟಾಯಿತು. ಜತೆಗೆ ನಾಗರಿಕರು ಸ್ಥಳೀಯವಾಗಿ ಎದುರಿಸುತ್ತಿರುವ ಸಂಕಷ್ಟಕ್ಕೆ ಪಾಲಿಕೆ ಅಧಿಕಾರಿಗಳಿಂದ ಸ್ಪಂದನೆ ಸಿಗುವಂತೆ ಭರವಸೆ ದೊರೆಯಿತು.
ಪ್ರತೀ ತಿಂಗಳು ವಲಯಗಳಿಗೆ 2 ಬಾರಿ ಭೇಟಿ ನೀಡುವ ‘ಆಯುಕ್ತರ ನಡೆ ವಲಯದ ಕಡೆಗೆ’ ಕಾರ್ಯಕ್ರಮ ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಆರ್.ಆರ್.ನಗರದಿಂದ ಆರಂಭಿಸಿರುವ ಈ ಕಾರ್ಯಕ್ರಮದ ಮೂಲಕ ಜನರಿಗೆ ಪಾಲಿಕೆಯಿಂದ ಸಿಗಬೇಕಿರುವ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಜತೆಗೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಆರ್.ಆರ್.ವಲಯದ ವಿವಿಧ ಪ್ರದೇಶಗಳಲ್ಲಿ ಸ್ಥಳಪರಿಶೀಲನೆ ನಡೆಸಿದ ಅವರು, ಜಾಲಹಳ್ಳಿ, ಬೆಮೆಲ್ ಬಡಾವಣೆಯ 5ನೇ ಹಂತ, ಪಟ್ಟಣಗೆರೆಯ ನಂದಾದೀಪ ಲೇಔಟ್, ಹೊಸಕೆರೆಹಳ್ಳಿ ಕೆರೆ ಕೋಡಿ, ಮಲ್ಲತ್ತಹಳ್ಳಿ, ಹೇರೋಹಳ್ಳಿ, ಬಂಗಾರಪ್ಪನಗರ ಸೇರಿ ಹಲವು ಸ್ಥಳಗಳಲ್ಲಿ ಸಮಸ್ಯೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಒದಗಿಸಿದರು. ವಲಯ ಹಾಗೂ ಕೇಂದ್ರ ಕಚೇರಿಯ ಮಟ್ಟದಲ್ಲಿ ಕೈಗೊಳ್ಳಬೇಕಿರುವ ನಿರ್ಧಾರಗಳನ್ನು ಸಂಬಂಧಿಸಿದ ಕೆಳ ಹಂತದ ಅಧಿಕಾರಿಗಳು ಸಮಯ ವ್ಯರ್ಥ ಮಾಡದೆ ಕೂಡಲೇ ಗಮನಕ್ಕೆ ತಂದಲ್ಲಿ ತ್ವರಿತ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನಾಗರಿಕರ ಸಮಸ್ಯೆಗೆ ಸ್ಪಂದಿಸಿ:
ಯಾವುದೇ ವಲಯದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಲ್ಲಿ ಅವುಗಳನ್ನು ಆಲಿಸಿ ಕಾನೂನು ಪ್ರಕಾರವಾಗಿ ತ್ವರಿತವಾಗಿ ಸ್ಪಂದಿಸಬೇಕು. ವೃಥಾ ಅಲೆದಾಡಿಸದೆ ಕಾಲಮಿತಿಯೊಳಗೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು. ಜಾಲಹಳ್ಳಿ ಬಳಿಯ ಟಾಟಾ ಐಕ್ಯುಲೈಟ್ಸ್ ಅಪಾರ್ಟ್‌ಮೆಂಟ್ ಬಳಿಯ ಕಳಿಂಗ ರಸ್ತೆಯನ್ನು ಒಂದೂವರೆ ವರ್ಷದಿಂದ ದುರಸ್ತಿ ಮಾಡದ ಬಗ್ಗೆ ದೂರು ಆಲಿಸಲಾಯಿತು. ಕೆ ರೈಡ್ ಕಾಮಗಾರಿ ನೆಪ ಮಾಡಿ ರಸ್ತೆ ದುರಸ್ತಿ ಮಾಡದಿರುವುದು ಸರಿಯಾದ ನಿಲುವಲ್ಲ ಎಂಬುದಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು. ಇಂತಹ ಸಮಸ್ಯೆಗಳಿಗೆ ಸ್ಥಳೀಯ ಅಧಿಕಾರಿಗಳೇ ಪರಿಹಾರ ಹುಡುಕಿ ಜನರಿಗೆ ಸೌಲಭ್ಯ ಒದಗಿಸಬೇಕು ಎಂದು ತಾಕೀತು ಮಾಡಿದರು.
ಜನರ ಅಹವಾಲು ಆಲಿಕೆ:
ಇದೇ ವೇಳೆ ವಲಯ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಆಯುಕ್ತರು 40ಕ್ಕೂ ಹೆಚ್ಚು ಮಂದಿಯಿಂದ ಅಹವಾಲು ಆಲಿಸಿದರು. ಪೌರಕಾರ್ಮಿಕರಾದ ಕಣ್ಣಮ್ಮ ತಮ್ಮ ವಯಸ್ಸು ತಪ್ಪಾಗಿ ನಮೂದಾಗಿರುವ ಕಾರಣ ಕೆಲಸದ ಕಾಯಂ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಮನವಿ ಮಾಡಿದರು. ಈ ಸಮಸ್ಯೆಯನ್ನು ಪರಿಶೀಲಿಸಿ ತಪ್ಪು ಸರಿಪಿಸುವಂತೆ ವಲಯ ಆಯುಕ್ತರಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ವಲಯ ಆರ್.ಆರ್.ನಗರ ವಲಯದ ಆಯುಕ್ತ ಸತೀಶ್, ವಲಯ ಜಂಟಿ ಆಯುಕ್ತ ಅಜಯ್, ಮುಖ್ಯ ಅಭಿಯಂತರ ಸ್ವಯಂಪ್ರಭ ಹಾಗೂ ಇತರ ಅಧಿಕಾರಿಗಳಿದ್ದರು.
ಮುದ್ದೆ ರುಚಿ ಸವಿದ ಕಮಿಷನರ್!
ಕೊಟ್ಟಿಗೆಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಎರಡು ದಿನಗಳಿಂದೀಚಿಗೆ ಹೊಸದಾಗಿ ಮುದ್ದೆ ಊಟ ನೀಡಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡಿದ ಮುಖ್ಯ ಆಯುಕ್ತರು, ಮುದ್ದೆ ಸವಿದು ರುಚಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಯೇ ಊಟ ಮಾಡುತ್ತಿದ್ದ ಗ್ರಾಹಕರನ್ನು ವಿಚಾರಿ ಊಟದ ಬಗ್ಗೆ ಮಾಹಿತಿ ಪಡೆದರು.
ತೆರವಿಗೆ ಮುನ್ನ ಸಮಯಾವಕಾಶ ನೀಡಿ:
ಅನಧಿಕೃತ ಕಟ್ಟಡವೆಂದು ಸಾಬೀತಾದಲ್ಲಿ ಮೊದಲು ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ನೀಡಬೇಕು. ತೆರವು ಮಾಡುವ ಮುನ್ನ ಸಮಯಾವಕಾಶವನ್ನೂ ನೀಡಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ತಪ್ಪದೇ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಯಿತು. ಇ-ಖಾತಾ ಪಡೆಯಲು ಇಸಿ ಅಗತ್ಯವಿಲ್ಲ. ತಾಂತ್ರಿಕ ಸಮಸ್ಯೆ ಇದ್ದಲ್ಲಿ ವಲಯವಾರು ಸಹಾಯ ಕೇಂದ್ರಗಳನ್ನು ತೆರೆದಿದ್ದು, ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಸ್ವತ್ತು ಮಾರಾಟಗಾರರಿಗೆ ತ್ವರಿತವಾಗಿ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.