ಶಿವಮೊಗ್ಗ: ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಹೋಟೆಲ್ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ಕಾಪಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಹೋಟೆಲ್ ಮಾಲೀಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡವರು ಆಹಾರ ಪದಾರ್ಥಗಳಲ್ಲಿ ಶುಚಿ-ರುಚಿ ಕಾಯ್ದುಕೊಳ್ಳಲು ತರಬೇತಿ ಪಡೆದುಕೊಳ್ಳಬೇಕು ಎಂದರು.
ಹೋಟೆಲ್ ಮಾಲೀಕರ ಸಂಘದ ಜಿಲ್ಲಾ ಕಾರ್ಯದರ್ಶಿ ಗೋಪಿನಾಥ್ ಮಾತನಾಡಿ, ಹೋಟೆಲ್ ಮಾಲೀಕರು ಆಹಾರ ಸುರಕ್ಷತಾ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಹಾರ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಂಕರನಾರಾಯಣ ಹೊಳ್ಳ ಮಾತನಾಡಿ, ಹೋಟೆಲ್ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹೆಚ್ಚಿನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಆಹಾರ ಸುರಕ್ಷತೆ ಅಧಿಕಾರಿ ಸೋಮೇಶ್, ಪ್ರಮುಖರಾದ ವಿಜಯಕುಮಾರ್, ದಿನಕರ್, ಮಣಿ ಗೌಂಡರ್, ಧರ್ಮಣ್ಣ, ಅಶೋಕ್, ರಮೇಶ್, ಬಿ.ಟಿ.ಹನುಮಂತಯ್ಯ, ಹೋಟೆಲ್ ಮಾಲೀಕರು, ನಿರ್ವಾಹಕರು, ಬೀದಿಬದಿ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡುವವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.