ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ

ಗುಂಡ್ಲುಪೇಟೆ: ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಪಾಲಕರಿಗೆ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಯೋಗೇಶ್ ಸಲಹೆ ನೀಡಿದರು.

ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘಗಳು ತಾಲೂಕಿನ ಮುಕ್ತಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣೆ ಹಾಗೂ ಮಕ್ಕಳಸ್ನೇಹಿ ಕಾನೂನುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಹಕ್ಕನ್ನು ನೀಡಲಾಗಿದೆ. ಬಡತನ, ತಿಳಿವಳಿಕೆ ಕೊರತೆ ಮುಂತಾದ ಕಾರಣಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಶಿಕ್ಷಣ ವಂಚಿತರನ್ನಾಗಿ ಮಾಡಿ, ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ಬಾಲಕರು ಸಮಾಜಘಾತುಕರ ಸಂಪರ್ಕಕ್ಕೆ ಸಿಲುಕುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳ ಹಕ್ಕುಗಳ ಬಗ್ಗೆಯೂ ಕಾನೂನುಗಳಿದ್ದು, ಅವುಗಳನ್ನು ಪಾಲಿಸಬೇಕು. ಬಾಲಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಲು ಉಚಿತ ಶಿಕ್ಷಣ, ಊಟ, ವಸತಿ, ವಿದ್ಯಾರ್ಥಿವೇತನ ಮುಂತಾದ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.

ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ನಾಗರಾಜ ಬಾರ್ಕಿ, ಸಹಾಯಕ ಸರ್ಕಾರಿ ಅಭಿಯೋಜಕ ಎ.ಎನ್.ರಾಜಣ್ಣ, ವಕೀಲರಾದ ರಾಜಶೇಖರಮೂರ್ತಿ, ಬಿ.ಪಿ.ಪುಟ್ಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಬರಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೋಹನ್, ಪಾಲಕರು ಇದ್ದರು.

Leave a Reply

Your email address will not be published. Required fields are marked *