ಐಎಂಎ ಮುಖ್ಯಸ್ಥನನ್ನು ಬಂಧಿಸಿ


ವಿಜಯವಾಣಿ ಸುದ್ದಿಜಾಲ ಹಾಸನ
ಬಹುಕೋಟಿ ವಂಚನೆಯ ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್‌ನನ್ನು ಬಂಧಿಸಿ ಹೂಡಿಕೆದಾರರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಪ್ರತಿಭಟನೆ ನಡೆಸಿದರು.
ದೇಶ ವಿದೇಶದ ಲಕ್ಷಾಂತರ ಜನರು ಅಧಿಕ ಹಣದಾಸೆಗೆ ಆಸ್ತಿ, ಒಡವೆ ಹಾಗೂ ವಸ್ತ್ರಾಭರಣ ಮಾರಾಟ ಮಾಡಿ ಐಎಂನಲ್ಲಿ ಹೂಡಿಕೆ ಮಾಡಿದ್ದಾರೆ. ತಮಗೆ ಬರುವ ಒಟ್ಟು ಲಾಭಾಂಶದಲ್ಲಿ ಹಂಚಿಕೆ ಮಾಡುವುದಾಗಿ ಹೇಳಿದ್ದ ಆಲಿ ಖಾನ್ ಕೊಟ್ಟ ಮಾತಿನಂತೆ ಪ್ರತಿ ತಿಂಗಳು ಹಣ ಪಾವತಿಸುತ್ತಿದ್ದ. ಆದರೆ ಕಳೆದೆರಡು ತಿಂಗಳಿಂದ ಸರಿಯಾಗಿ ಹಣ ಪಾವತಿಯಾಗಿರಲಿಲ್ಲ. ಐಎಂಎ ದಿವಾಳಿಯಾಗುತ್ತಿರುವ ಸಂಶಯ ಬಂದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಗ್ರಾಹಕರಿದ್ದರು. ಈಗ ಸಂಸ್ಥೆ ಮುಖ್ಯಸ್ಥ ದೇಶ ಬಿಟ್ಟು ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ನಷ್ಟದಿಂದ ಸಾಕಷ್ಟು ಜನರು ಆತ್ಮಹತ್ಯೆಗೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಗ್ರಾಹಕರು ಮಕ್ಕಳ ಮದುವೆ, ವಿದ್ಯಾಭ್ಯಾಸ ಸೇರಿದಂತೆ ಇತರ ಉದ್ದೇಶಕ್ಕಾಗಿ ಐಎಂಎನಲ್ಲಿ ಹೂಡಿಕೆ ಮಾಡಿದ್ದಾರೆ. ಅಂತವರೆಲ್ಲ ಬೀದಿಗೆ ಬಂದಿದ್ದಾರೆ ಎಂದು ಅಳಲು ತೋಡಿಕೊಂಡರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಣ ಹೂಡಿಕೆಯಲ್ಲಿ ತೊಡಗಿರುವ ಇತರೆ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾಯಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ಸಲ್ಲಿಸಿದರು.
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಿನೇಶ್ ಗೌಡ, ಉಪಾಧ್ಯಕ್ಷ ಜೀವನ್ ಗೌಡ, ತಾಲೂಕು ಅಧ್ಯಕ್ಷ ನೀತಿನ್ ಗೌಡ, ಜಿಲ್ಲಾ ಸಂಚಾಲಕ ಅಭಿಷೇಕ್, ದರ್ಶನ್ ಗೌಡ ಹಾಗೂ ಚಂದ್ರು ಪ್ರತಿಭಟನೆಯಲ್ಲಿ ಇದ್ದರು.

Leave a Reply

Your email address will not be published. Required fields are marked *