ಪೊಲೀಸ್ ಭವನದ ಆಸ್ತಿ ತೆರಿಗೆ ಪಾವತಿಗೆ ನೋಟಿಸ್

ಮೈಸೂರು: ನಗರದ ಪ್ರತಿಷ್ಠಿತ ಪೊಲೀಸ್ ಭವನಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಕಡಿಮೆ ಆಸ್ತಿ ತೆರಿಗೆಯನ್ನು ಪಾವತಿಸಿರುವುದು ಬಹಿರಂಗವಾಗಿದ್ದು, ವ್ಯತ್ಯಾಸವಾಗಿರುವ 1.65 ಕೋಟಿ ರೂ. ಬಾಕಿ ಆಸ್ತಿ ಕರವನ್ನು ಪಾವತಿ ಮಾಡಲು ಮೈಸೂರು ಮಹಾನಗರ ಪಾಲಿಕೆ ತಾಕೀತು ಮಾಡಿದೆ.

ಈ ಕುರಿತು ಪಾಲಿಕೆಯ ವಲಯ ಕಚೇರಿ-1ರ ಆಯುಕ್ತ ಕುಬೇರಪ್ಪ ಅವರು ನೋಟಿಸ್ ಜಾರಿ ಮಾಡಿದ್ದು, ಒಂದು ತಿಂಗಳ ಗಡುವು ನೀಡಲಾಗಿದೆ. ಮೇ 1ರೊಳಗೆ ಬಾಕಿ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಜರ್‌ಬಾದ್ ಮೊಹಲ್ಲಾದ ಲಲಿತ್ ಮಹಲ್ ರಸ್ತೆಯಲ್ಲಿರುವ ಪೊಲೀಸ್ ಭವನ ನಗರದ ಪ್ರತಿಷ್ಠಿತ ಸಮುದಾಯ ಭವನ. ಇಲ್ಲಿ ಮದುವೆ ಕಾರ್ಯಕ್ರಮಗಳು, ಸಭೆ-ಸಮಾವೇಶಗಳಿಗೆ ಇದು ವೇದಿಕೆಯಾಗಿದೆ. ಪೊಲೀಸ್ ಇಲಾಖೆಯ ನೌಕರರಿಗೆ ಮಾತ್ರ ರಿಯಾಯಿತಿ ದರದಲ್ಲಿ ಇದನ್ನು ಬಾಡಿಗೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಇದರ ಒಂದು ದಿನ ಬಾಡಿಗೆಗೆ 1.50 ಲಕ್ಷ ರೂ. ಇದೆ.

ಈ ಕಟ್ಟಡವು ‘ಮೆ.ಕಮಾಂಡೆಂಟ್, ಕೆಎಆರ್‌ಪಿ’ ಹೆಸರಿನಲ್ಲಿ ಖಾತೆ ನೋಂದಣಿಯಾಗಿದೆ. ಇದನ್ನು ನಿರ್ಮಿಸುವ ಸಂದರ್ಭದಲ್ಲಿ ನಗರ ಪಾಲಿಕೆಯಿಂದ ಯಾವುದೇ ರೀತಿಯ ಅನುಮೋದಿತ ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ (ಸಿ.ಸಿ.) ಪಡೆದಿಲ್ಲ ಎಂಬುವುದು ಕೂಡ ಬೆಳಕಿಗೆ ಬಂದಿದೆ.

ಕಟ್ಟಡದ ಎಲ್ಲ ಮಹಡಿಗಳು ಸೇರಿ ಒಟ್ಟು 42,600 ಚದರ ಅಡಿ ಅಳತೆ ಪ್ರಕಾರ ಆಸ್ತಿ ತೆರಿಗೆ ಪಾವತಿ ಮಾಡಲಾಗಿದೆ. ಆದರೆ, ಇದು ತಪ್ಪು ಮಾಹಿತಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿ ನಕ್ಷೆ ತಯಾರು ಮಾಡಿದ್ದು, ಈ ಪ್ರಕಾರ ಕಟ್ಟಡದ ಎಲ್ಲ ಮಹಡಿಗಳು ಸೇರಿ 64,218 ಚದರ ಅಡಿಗಳಿದ್ದು, ಈ ಪ್ರಕಾರ ತೆರಿಗೆ ಪಾವತಿ ಮಾಡಿಲ್ಲ. ಇದನ್ನು ಪಾಲಿಕೆ ಇದೀಗ ಪತ್ತೆ ಮಾಡಿದೆ.

ಸದರಿ ವ್ಯತ್ಯಾಸದ ಅಳತೆಗೆ ಮತ್ತು ಅನುಮೋದಿತ ನಕ್ಷೆ, ಸಿ.ಸಿ. ಪ್ರಮಾಣ ಪತ್ರ ಪಡೆದಿಲ್ಲವಾದ್ದರಿಂದ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976 ನಿಯಮ 112ರ ಪ್ರಕಾರ ಆಸ್ತಿ ತೆರಿಗೆ ಮೊತ್ತದೊಂದಿಗೆ ಎರಡು ಪಟ್ಟು ದಂಡವನ್ನು ಪಾವತಿಸಲು ಅದು ಸೂಚಿಸಿದೆ.

2003-04ರಿಂದ 2018-19ನೇ ಸಾಲಿನವರೆಗೂ ಪಾವತಿಸಿರುವ ಆಸ್ತಿ ತೆರಿಗೆ ಮೊತ್ತವನ್ನು ಕಳೆದು ಸದರಿ ಕಟ್ಟಡಕ್ಕೆ ವ್ಯತ್ಯಾಸದ 1,65,80,181 ರೂ.ರಷ್ಟು ತೆರಿಗೆಯನ್ನು ನಿಗದಿ ಪಡಿಸಿದ್ದು, ಕೂಡಲೇ ಇದನ್ನು ಪಾವತಿಸಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ. ಕರ್ನಾಟಕ ಅಶ್ವರೋಹಿ ಪೊಲೀಸ್ ತುಕಡಿ ಕೆಎಆರ್‌ಪಿ(ಮೌಂಟೆಡ್ ಕಂಪನಿ) ಹಿಂಭಾಗದಲ್ಲಿ ಈ ಕಟ್ಟಡವಿದ್ದು, 1999ರ ಜೂನ್ 2ರಂದು ಶಂಕುಸ್ಥಾಪನೆ ಮಾಡಿದ್ದು, 2001ರ ಜೂನ್ 9ರಂದು ಕಟ್ಟಡದ ಕೆಲಸ ಮುಗಿದಿದೆ. ಅದೇ ವರ್ಷ ಆಗಸ್ಟ್ 11ರಂದು ಉದ್ಘಾಟನೆಗೊಂಡಿದೆ.

ನಿಯಮಾನುಸಾರ ಆಸ್ತಿ ತೆರಿಗೆ ಪಾವತಿ ಮಾಡಿದ್ದು, ಆದರೀಗ ಪಾಲಿಕೆಯಿಂದ ಯಾವುದೇ ನೋಟಿಸ್ ನಮಗೆ ತಲುಪಿಲ್ಲ. ಅದು ಕೈ ಸೇರಿದ ಬಳಿಕ ಅದನ್ನು ಪರಿಶೀಲಿಸಿ ಬಾಕಿ ತೆರಿಗೆಯನ್ನು ನಿಯಮಾನುಸಾರ ಇತ್ಯರ್ಥ ಮಾಡಲಾಗುವುದು.
ಕೆ.ಟಿ.ಬಾಲಕೃಷ್ಣ ನಗರ ಪೊಲೀಸ್ ಆಯುಕ್ತರು

Leave a Reply

Your email address will not be published. Required fields are marked *