ಲಿಂಗಸುಗೂರು: ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಒತ್ತಾಯಿಸಿ ಗೋನವಾಟ್ಲ ಮತ್ತು ಗುಂತಗೋಳ ರೈತರು ಪಟ್ಟಣದ ಜೆಸ್ಕಾಂ ಜೆಇ ಶರಣಗೌಡಗೆ ಸೋಮವಾರ ಮನವಿ ಸಲ್ಲಿಸಿದರು.
ಇದನ್ನು ಓದಿ: ವಿದ್ಯುತ್ ಅವಘಡ, ಕಾರ್ಮಿಕ ಸಾವು
ತಾಲೂಕಿನ ಗೋನವಾಟ್ಲ ಮತ್ತು ಗುಂತಗೋಳ ಗ್ರಾಮದಲ್ಲಿ ಕಳೆದ ಹಲವು ತಿಂಗಳಿಂದ ನಿರಂತರವಾಗಿ ವಿದ್ಯುತ್ ವ್ಯತ್ಯಯ ಹಾಗೂ ಪಂಪ್‌ಸೆಟ್ ಪೂರಕವಾದ ವೋಲ್ಟೇಜ್ ನೀಡುತ್ತಿಲ್ಲ. ಹೀಗಾಗಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗುತ್ತಿವೆ.
ದಿನದಲ್ಲಿ ನಿರಂತರವಾಗಿ ಏಳು ಗಂಟೆ ತ್ರಿಫೇಸ್ ವಿದ್ಯುತ್ ಒದಗಿಸಬೇಕು. ಆದರೆ ದಿನಕ್ಕೆ ಕೇವಲ ಎರಡ್ಮೂರು ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನ ಬಿತ್ತನೆ ಮಾಡಿದ ಬೆಳೆಗಳು ಭಾಗಶಃ ನಾಶವಾಗಿದ್ದು, ಉಳಿದ ಬೆಳೆಗಳ ರಕ್ಷಣೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.