ಹೊಳೆನರಸೀಪುರ: ಪಟ್ಟಣದಿಂದ ನಿತ್ಯ ಓಡಾಡುವವರಿಗೆ ನಿಗದಿತ ಸಮಯದಲ್ಲಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಲ ಕಾರ್ಮಿಕರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಿದರು.
ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಮಾತನಾಡಿ, ನಿತ್ಯ ನೂರಾರು ಜನರು ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಹಾಸನದ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆ ಹಾಗೂ ಗಾರ್ಮೆಟ್ಸ್ ಕೆಲಸದ ನಿಮಿತ್ತ ಓಡಾಡುತ್ತಿದ್ದಾರೆ. ಆದರೆ ಬೆಳಗ್ಗೆ 7ರ ನಂತರ 10 ಗಂಟೆಯವರೆಗೂ ಬಸ್‌ಗಳ ಸಂಚಾರ ವಿರಳವಾಗಿದೆ. ಅದರಲ್ಲೂ ಕೈಗಾರಿಕಾ ಪ್ರದೇಶದಲ್ಲಿ ನಿಲುಗಡೆಗೊಳಿಸುವ ಶೆಟಲ್ ಬಸ್ ಸೌಲಭ್ಯ ಇಲ್ಲ. ಇದರಿಂದಾಗಿ ಪ್ರಯಾಣಿಕರ ಅನುಕೂಲತೆಗಾಗಿ ಬೆಳಗ್ಗೆ 8 ಗಂಟೆ ಸಮಯದಲ್ಲಿ ಹೆಚ್ಚುವರಿಯಾಗಿ ಒಂದು ಬಸ್ ಹಾಕಬೇಕೆಂದು ಕೋರಿದರು.