ಹೆದ್ದಾರಿ ಬದಿಯ ನಿವಾಸಿಗಳಿಗೆ ವ್ಯವಸ್ಥೆ ಕಲ್ಪಿಸಿ

ಭಟ್ಕಳ: ಹೆದ್ದಾರಿ ವಿಸ್ತರಣೆ ಪ್ರಕ್ರಿಯೆಯಿಂದ ಹೆದ್ದಾರಿ ಬದಿಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಭೂಸ್ವಾಧೀನ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಬಳಿಯ ನಿವಾಸಿಗಳು ಒತ್ತಾಯಿಸಿದರು.
ಇಲ್ಲಿನ ಮಾರುತಿ ನಗರದ ರಾಘವೇಂದ್ರ ಸ್ವಾಮಿ ಮಠದ ಬಳಿ ಭಾನುವಾರ ಸೇರಿದ್ದ ಸ್ಥಳೀಯರು ಹೆದ್ದಾರಿ ಕಾಮಗಾರಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಮನೆಯ ಮಾಡಿನಕ್ಕಿಂತ ಹೆದ್ದಾರಿ ಎತ್ತರವಾಗಿದೆ. ನಾವು ಮನೆಗೆ ಹೋಗಲು ಗುಡ್ಡ, ಬೆಟ್ಟ ಇಳಿದಂತೆ ಸಾಹಸ ಮಾಡಬೇಕಿದೆ. ಮಣ್ಣು ಹಾಕಿ ನಿವಾಸಿಗಳಿಗೆ ತಿರುಗಾಡಲು ವ್ಯವಸ್ಥೆ ಮಾಡಬೇಕು ಎನ್ನುವ ಪರಿಜ್ಞಾನವೂ ಇಲಾಖೆಗಳಿಗಿಲ್ಲ. ಮನೆಯಲ್ಲಿ ವಯಸ್ಸಾದ ಪಾಲಕರು ಇದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡಬೇಕಿದೆ. ಚರಂಡಿ ವ್ಯವಸ್ಥೆ ಅವೈಜ್ಞಾನಿಕ. ಹೆದ್ದಾರಿ ಬದಿಯ ಮರದ ಬುಡಗಳನ್ನು ತೆಗೆದು ಮನೆಯ ಎದುರು ಹಾಕಲಾಗಿದೆ. ಕೇಳಿದರೆ ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಾರೆ. ಇದಕ್ಕೆಲ್ಲ ಶೀಘ್ರ ಸ್ಪಂದಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಶ್ರೀನಿವಾಸ ಪಡಿಯಾರ ಹೇಳಿದರು.
ಪ್ರಾಚಾರ್ಯ ಮಂಜುನಾಥ ಪ್ರಭು ಮಾತನಾಡಿ, ಚರಂಡಿ ವ್ಯವಸ್ಥೆ ಕಲ್ಪಿಸಲು ಪುರಸಭೆ ಬಳಿ ಕೇಳಿದರೆ ಅವರು ಹೆದ್ದಾರಿ ಪ್ರಾಧಿಕಾರಕ್ಕೆ ಬೊಟ್ಟು ಮಾಡುತ್ತಾರೆ. ಪ್ರಾಧಿಕಾರಕ್ಕೆ ವಿಚಾರಿಸಿದರೆ ರಸ್ತೆ ಮಾಡುವುದು ಮಾತ್ರ ನಮ್ಮ ಕೆಲಸ ಎನ್ನುತ್ತಿದ್ದಾರೆ. ಹೀಗಾದರೆ ನಾವು ಯಾರ ಬಳಿ ಹೋಗಬೇಕು. ಭೂಮಿ ಕಳೆದುಕೊಂಡ ಸಂಕಟ ಒಂದೆಡೆಯಾದರೆ, ಮಾಹಿತಿ ನೀಡದೆ ಮನಸ್ಸಿಗೆ ಬಂದಂತೆ ವರ್ತಿಸುವ ಸಿಬ್ಬಂದಿ ನಡತೆ ಇನ್ನೊಂದೆಡೆ, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ 2 ದಿನಗಳಲ್ಲಿ ಭೂಸ್ವಾಧೀನಾಧಿಕಾರಿಗಳು ವಿಸ್ತರಣೆಯ ಕುರಿತು ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಸುಬ್ರಾಯ ದೇವಾಡಿಗ, ಜಿ.ಪಿ. ಪ್ರಭು, ಮಂಜುನಾಥ ಪ್ರಭು, ಶ್ರೀನಿವಾಸ ಪಡಿಯಾರ, ಅಶೋಕ ಹೆಗಡೆ, ಗಿರಿಧರ ನಾಯಕ, ಎಂ.ಎಂ. ಲೀಮಾ, ಗಜಾನನ ಯಾಜಿ, ಗಣಪಯ್ಯ ಪೈ, ಶಂಕರ ಪೈ, ನಾಗೇಶ ಪೈ, ವಿಠೋಬ ಬಾಳೇರಿ ಇತರರು ಇದ್ದರು.