ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಡಿಆರ್‌ಎಂ ಕಾಲೇಜಿನಿಂದ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಕಚೇರಿಗೆ ತರಳಿ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸರ್ವರಿಗೂ ಸಿಗಬೇಕಾದ ಅಮೂಲ್ಯ ಸಂಪತ್ತು. ಇದನ್ನು ಜಾತಿ, ಮತ, ಶ್ರೀಮಂತ-ಬಡವ ಎನ್ನದೇ ಕಲ್ಪಿಸುವ ಹೊಣೆಗಾರಿಕೆ ಸರ್ಕಾರಗಳದ್ದು. 2018-19ನೇ ಸಾಲಿನ ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಸೇರಿ ಎಲ್ಲಾ ವರ್ಗದವರಿಗೂ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ಯೋಜನೆ ಇಂದಿನವರೆಗೂ ಜಾರಿಯಾಗಿಲ್ಲ. ಇದು ವಿದ್ಯಾರ್ಥಿಗಳ ಮೇಲಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು, ರೈತಾಪಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂದಿನ ಖಾಸಗಿ ಕಾಲೇಜುಗಳ ಡೋನೆಷನ್ ಹಾವಳಿ, ವಾಣಿಜ್ಯಕರಣಗೊಂಡ ಶಿಕ್ಷಣದಿಂದ ಬಡವರು, ಹಿಂದುಳಿದ, ಪ್ರತಿಭಾವಂತ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ಬಸ್‌ಪಾಸ್ ಸೌಲಭ್ಯ ಪಡೆಯುತ್ತಿದ್ದಾರೆ. ಹಳ್ಳಿಗಳಿಂದ ಪಟ್ಟಣ, ನಗರಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಉಚಿತ ಬಸ್‌ಪಾಸ್ ವಿತರಿಸಿದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಯಾವುದೇ ನೆಪಹೇಳದೇ ಶೀಘ್ರವೇ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪರಿಷತ್ ನಗರ ಕಾರ್ಯದರ್ಶಿ ರಾಕೇಶ್, ಕಿರಣ್, ವಿನಯ್, ಆಕಾಶ್, ಯೋಗಾನಂದ, ಜನಾರ್ದನ, ರಾಮು, ಶರತ್ ಇತರರಿದ್ದರು.

Leave a Reply

Your email address will not be published. Required fields are marked *