ತಿ.ನರಸೀಪುರ: ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೇ ವಾಣಿಜ್ಯ ಮಳಿಗೆ ಕಟ್ಟಡ ನೆಲಸಮ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಅತಂತ್ರರಾಗಿರುವ ಬೀದಿಬದಿ ವ್ಯಾಪಾರಸ್ಥರಿಗೆ ಡಿ.17ರೊಳಗೆ ಪರ್ಯಾಯ ಸ್ಥಳವಕಾಶ ಕಲ್ಪಿಸಲು ಪುರಸಭೆ ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್ ಒತ್ತಾಯಿಸಿದರು.
ಈ ಕಾಲಮಿತಿಯೊಳಗೆ ಪುರಸಭೆ ಆಡಳಿತ ವಿಳಂಬ ನೀತಿ ಅನುಸರಿಸಿ, ನಿರ್ಲಕ್ಷೃ ವಹಿಸಿದ್ದಲ್ಲಿ ಪುರಸಭೆ ಕಚೇರಿ ಮುಂಭಾಗ ‘ಬೀದಿ ಬದಿ ವ್ಯಾಪಾರಸ್ಥರಿಗೆ ಬದುಕಲು ವ್ಯಾಪಾರ ಸ್ಥಳ ಕೊಡಿ ಇಲ್ಲವೇ ಸಾಯಲು ವಿಷ ಕೊಡಿ’ ಎಂಬ ಘೋಷಣೆಯೊಂದಿಗೆ ಅನಿರ್ದಿಷ್ಟಾವಧಿ ಧರಣಿ ಕೂರಲಾಗುವುದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಜೀವನ ನಿರ್ವಹಣೆಗೆ ಬೀದಿಬದಿ ವ್ಯಾಪಾರ ಆಶ್ರಯಿಸಿಕೊಂಡು ಸ್ವಾವಲಂಬಿಗಳಾಗಿ ಪುರಸಭೆಗೆ ನೆಲ ಸುಂಕ ಪಾವತಿಸಿ ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರನ್ನು ಯಾವುದೇ ಮುನ್ಸೂಚನೆ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಒಕ್ಕಲಿಬ್ಬಿಸಿರುವುದರಿಂದ ವ್ಯಾಪಾರ ಇಲ್ಲದೆ ಮತ್ತು ಬ್ಯಾಂಕ್, ಫೈನಾನ್ಸ್ ಕೆಲ ವ್ಯಕ್ತಿಗಳಿಂದ ಬಡ್ಡಿಗೆ ಕೈ ಸಾಲ ಪಡೆದು ಸಾಲವನ್ನು ತೀರಿಸಲಾಗದೆ ತೊಂದರೆಗೆ ಸಿಲುಕಿದ್ದಾರೆ. ಈ ಕುಟುಂಬಗಳು ಬೀದಿ ಪಾಲಾಗುವ ಕಾಲ ಸನ್ನಿಹಿತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಸ್ತೆ ಬದಿ ವ್ಯಾಪಾರ ತೆರವುಗೊಳಿಸಿ 2 ತಿಂಗಳು ಕಳೆಯುತ್ತಿದ್ದರೂ ವ್ಯಾಪಾರಸ್ಥರಿಗೆ ಪರ್ಯಾಯ ವ್ಯಾಪಾರ ಸ್ಥಳ ನೀಡಲು ಪುರಸಭೆ ಆಡಳಿತದ ಬೇಜವಾಬ್ದಾರಿ ನಿಜಕ್ಕೂ ಖಂಡನೀಯ. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ಗಿರೀಶ್, ತಾಲೂಕು ಸಂಚಾಲಕ ನಿಲಸೋಗೆ ಕುಮಾರ್, ಜಿಲ್ಲಾ ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ, ತೊಟ್ಟವಾಡಿ ರಾಜಪ್ಪ, ಸೋಮನಾಥಪುರ ಗೋವಿಂದರಾಜು, ಸೋಸಲೆ ಶಿವಕುಮಾರ್, ಕುಪ್ಪೆ ಗವಿಸಿದ್ದಯ್ಯ, ಬೈರಾಪುರ ಅರ್ಜುನ್, ಕೊಳತ್ತೂರು ಪ್ರಭಾಕರ್, ವಿನಯ್, ನರಗ್ಯತನ ಹಳ್ಳಿ ಮನೋಜ್, ಚೌಹಳ್ಳಿ ಪರಶುರಾಮ್, ಕರೋಹಟ್ಟಿ ರಜನೀಶ್ ಇದ್ದರು.