ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್, ಜೂಜಾಟದಿಂದ ತಾಲೂಕಿನ ಹಳೇಬೂದನೂರು ಗ್ರಾಮದ ತ್ಯಾಗರಾಜು ಆತ್ಮಹತ್ಯೆ ಶರಣಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮಾತ್ರವಲ್ಲದೆ ದಂಧೆಕೋರರಿಂದ ಕಪ್ಪು ಕಾಣಿಕೆ ಪಡೆದು ಅಕ್ರಮ ಚಟುವಟಿಕೆ ನಿರಾಂತಕವಾಗಿ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಕರುನಾಡ ಸೇವಕರು ಸಂಘಟನೆ ನೇತೃತ್ವದಲ್ಲಿ ಕನ್ನಡಪರ, ಪ್ರಗತಿಪರ ಹಾಗೂ ಸಮಾನ ಮನಸ್ಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ಯುವಜನರನ್ನು ಬಲಿ ಪಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ, ಹುಕ್ಕಾ ಅಡ್ಡ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರ ವೈಫಲ್ಯ ತೋರುತ್ತಿದ್ದಾರೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಜೂಜು, ಹುಕ್ಕಾ ಅಡ್ಡ ಹಾಗೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ವ್ಯಾಪಕವಾಗಿ ನಡೆಯುತ್ತಿದೆ. ಇಂತಹ ಜಾಲಕ್ಕೆ ಸಿಲುಕಿ ಯುವ ಜನತೆ ಹಣ, ಆಸ್ತಿ ಜತೆಗೆ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಹಳೇ ಬೂದನೂರು ಗ್ರಾಮದ ತ್ಯಾಗರಾಜು ರೈಲಿಗೆ ತಲೆ ಕೊಟ್ಟು ಪ್ರಾಣತೆತ್ತ ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದರೂ ಸಹ ಇದಕ್ಕೆ ಕಾರಣವಾಗಿರುವ ಅಂಶಗಳು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಒಳಗಿನಿಂದಲೆ ಹಾಳು ಮಾಡಲಿವೆ. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕ್ರಿಕೆಟ್ ಬೆಟ್ಟಿಂಗ್, ಗದ್ದೆ ಬಯಲುಗಳಲ್ಲಿ ಅಕ್ರಮ ಇಸ್ಪೀಟ್ ಜೂಜು ಸಾವಿರಾರು ಯುವಕರನ್ನು ಲಕ್ಷಾಂತರ ರೂ ಸಾಲದ ಬಲೆಗೆ ಕೆಡವಿದೆ. ಬೆಟ್ಟಿಂಗ್ ದಂಧೆಕೋರರು, ಇಸ್ಪೀಟು ಜೂಜು ಮಾಫಿಯಾದವರ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದೇ ರೀತಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ, ಹುಕ್ಕಾ ಸರಬರಾಜು ನಾಗರಿಕ ಸಮಾಜವನ್ನು ದಿಗ್ಬ್ರಮೆ ಹುಟ್ಟಿಸಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗದ್ದೆ ಬಯಲುಗಳ ಇಸ್ಪೀಟು ಜೂಜು ಅಡ್ಡೆಗಳಿಗೆ ರಾಜಕೀಯ ನಾಯಕರು ಹಾಗೂ ಪೊಲೀಸ್ ಇಲಾಖೆ ಮಹಾ ಪೋಷಕರು ಎಂಬ ಚರ್ಚೆ ವ್ಯಾಪಕವಾಗಿದೆ. ಇಂತಹ ದಂಧೆಕೋರರಿಂದ ನಿಯಮಿತವಾದ ಕಪ್ಪ ಕಾಣಿಕೆ ಪೊಲೀಸ್ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದ ಅಕ್ರಮ ದಂಧೆ ಸುಗಮವಾಗಿ ನಡೆಯುತ್ತಿದೆ. ಅಕ್ರಮ ದಂಧೆಕೋರರ ಹಾವಳಿಯಿಂದ ರೈತರು ವಂಶಪಾರಂಪರ್ಯ ಕಾಪಾಡಿಕೊಂಡು ಬಂದಿದ್ದ ಕೃಷಿ ಭೂಮಿ ಕಳೆದುಕೊಳ್ಳುವಂತ ಸ್ಥಿತಿ ಸೃಷ್ಟಿಯಾಗಿದೆ. ಸಾವಿರಾರು ಯುವಕರು ಊರು ತೊರೆಯುವಂತ ಇಲ್ಲವೆ ಆತ್ಮಹತ್ಯೆಯ ದಾರಿ ಹಿಡಿಯುವಂತ ವಾತಾವರಣ ನಿರ್ಮಾಣವಾಗಿದೆ. ನಾಗರಿಕರಿಗೆ ಆತ್ಮವಿಶ್ವಾಸ ತುಂಬಬೇಕಿರುವ ಪೊಲೀಸ್ ಇಲಾಖೆ ಅಪಾದಿತರ ಜತೆ ನಿಂತಿರುವುದು ನಾಚಿಕೆಗೇಡಿನ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯವಾಗಿ ಹಳೇ ಬೂದನೂರು ಗ್ರಾಮದ ತ್ಯಾಗರಾಜು ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಅರಕ್ಷಕ ನಿರೀಕ್ಷಕರನ್ನ ಸೇವೆಯಿಂದ ಅಮಾನತು ಮಾಡಬೇಕು. ಪೊಲೀಸರ ವಿರುದ್ಧ ಕ್ರಮದ ಮೂಲಕ ಬೆಟ್ಟಿಂಗ್ ಹಾಗೂ ಜೂಜು ಮಾಫಿಯಾಕ್ಕೆ ಬಲವಾದ ಸಂದೇಶ ರವಾನಿಸಿ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಮಾತ್ರವಲ್ಲದೆ ಬೆಟ್ಟಿಂಗ್ ದಂಧೆಕೋರರು ಹಾಗೂ ಗದ್ದೆ ಬಯಲು ಜೂಜುಕೋರರ ವಿರುದ್ಧ ಕ್ರಮವಹಿಸಿ ಅಕ್ರಮ ದಂಧೆ ನಿಯಂತ್ರಣಕ್ಕೆ ಮುಂದಾಗಬೇಕು. ಇನ್ನು ಹದಿನೈದು ದಿನದಲ್ಲಿ ದಂಧೆಗೆ ಕಡಿವಾಣ ಹಾಕದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರುನಾಡು ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ರೈತ ಸಂಘದ ಶಿವಳ್ಳಿ ಚಂದ್ರಶೇಖರ್, ವಕೀಲ ಜೆ.ರಾಮಯ್ಯ ಇತರರಿದ್ದರು.
ಇದಾದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಡಿಸಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿ ತುರ್ತು ಕ್ರಮ ವಹಿಸುವಂತೆ ಒತ್ತಾಯಿಸಿದರು.