More

    ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

    ಹುಬ್ಬಳ್ಳಿ: ಮಹಾನಗರ ಪಾಲಿಕೆ ಕೈಗೊಂಡ ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ವಿರೋಧಿಸಿ ನೂರಾರು ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಮಂಗಳವಾರ ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ, ಸಮತಾ ಸೇನೆ ಹಾಗೂ ಪಟ್ಟಣ ಮಾರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಳೆದ 1 ವಾರದಿಂದ ಹು-ಧಾ ಮಹಾನಗರ ಪಾಲಿಕೆ ಫುಟ್​ಪಾತ್, ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಡಬ್ಬಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸುತ್ತಿದೆ.

    ‘ಕಾರ್ಯಾಚರಣೆ ವೇಳೆ ವಲಯ ಕಚೇರಿ 9ರ ಸಹಾಯಕ ಆಯುಕ್ತರು ವ್ಯಾಪಾರಕ್ಕೆ ತಂದಿದ್ದ ಹೂವು-ಹಣ್ಣು, ತರಕಾರಿಗಳನ್ನು ಕಸ ಸಾಗಿಸುವ ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಅವರನ್ನು ಬದಲಾಯಿಸಬೇಕು. ಬುಧವಾರ ನಡೆಯುವ ಸಭೆಯವರೆಗೂ ಈಗಿರುವ ಸ್ಥಳದಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.

    ಸಹಾಯಕ ಆಯುಕ್ತರ ವರ್ಗಾವಣೆ ಮಾಡುವ ಅಧಿಕಾರ ನನಗಿಲ್ಲ. ಇದಕ್ಕೆ ಆಯುಕ್ತರು ಮಾತ್ರ ಉತ್ತರ ನೀಡಬಲ್ಲರು. ಅವರು ಧಾರವಾಡದಲ್ಲಿ ಸಭೆಯಲ್ಲಿ ಇದ್ದಾರೆ ಎಂದು ಉಪ ಆಯುಕ್ತ (ಕಂದಾಯ) ಎಂ.ಬಿ. ಸಬರದ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆಯುಕ್ತರಿಗೆ ಕರೆ ಮಾಡಿ ವಿಷಯವನ್ನು ಗಮನಕ್ಕೆ ತಂದರು.

    ಬುಧವಾರ ನಡೆಯುವ ಪಟ್ಟಣ ಮಾರಾಟ ಸಮಿತಿ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ವಿಷಯ ಚರ್ಚೆಗೆ ಬರಬೇಕು ಹಾಗೂ ಸಹಾಯಕ ಆಯುಕ್ತರ ವರ್ಗಾವಣೆ ವಿಷಯವನ್ನು ಗುರುವಾರ ಇತ್ಯರ್ಥ ಪಡಿಸಬೇಕು ಎಂಬ ಬೇಡಿಕೆಗೆ ಪಾಲಿಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

    ವಿವಿಧ ಸಂಘಟನೆಗಳ ಪ್ರಮುಖರಾದ ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ರಿಯಾಜ್​ಅಹ್ಮದ್ ಡಾಲಾಯತ, ಯಮನೂರ ಗುಡಿಹಾಳ, ರೇವಣಸಿದ್ದಪ್ಪ ಹೊಸಮನಿ, ಕವಿತಾ ದೊಡವಾಡ, ಇತರರು ಇದ್ದರು.

    ಸಭೆ ಇಂದು

    ಹು-ಧಾ ಪಟ್ಟಣ ಮಾರಾಟ ಸಮಿತಿಯ ಸಭೆ ಜ. 6ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಈ ಸಮಿತಿಯು 2019 ಡಿಸೆಂಬರ್​ನಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. ಆರಂಭದಲ್ಲಿ ಒಮ್ಮೆ ಪರಿಚಯಾತ್ಮಕ ಸಭೆ ನಡೆದಿತ್ತು. ಸಭೆ ದಿನಾಂಕ ನಿಗದಿಪಡಿಸಿ 2 ಬಾರಿ ರದ್ದು ಪಡಿಸಲಾಗಿದೆ. ನಿಯಮಗಳ ಪ್ರಕಾರ ಪ್ರತಿ 3 ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಯಬೇಕಿದೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts