ಶಾಸಕರ ರಾಜೀನಾಮೆ ಖಂಡಿಸಿ ಕರವೇ ಪ್ರತಿಭಟನೆ

ಹಾವೇರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 14 ಶಾಸಕರನ್ನು ಮರು ಚುನಾವಣೆಗೆ ನಿಲ್ಲದಂತೆ ಶಾಸನ ರಚಿಸಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದಿಂದ ಗುರುವಾರ ಬೆಳಗ್ಗೆ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ರಾಜ್ಯ ಉಪಾಧ್ಯಕ್ಷ ರಾಮು ತಳವಾರ ಮಾತನಾಡಿ, ರಾಜ್ಯದಲ್ಲಿ ಕಳೆದ ಏಳೆಂಟು ತಿಂಗಳಿಂದ ಕೆಲವು ಶಾಸಕರು ಅರಾಜಕತೆಯ ವಾತಾವರಣ ಸೃಷ್ಟಿಸಿದ್ದಾರೆ. ಈಗ 14 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಲವಂತದ ಚುನಾವಣೆ ಹೇರುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕುಳಿತುಕೊಂಡಿರುವ ಶಾಸಕರುಗಳು ಕನ್ನಡಿಗರ ಮಾನ ಹರಾಜು ಹಾಕುತ್ತಿದ್ದಾರೆ. ಡಿ.ಕೆ. ಶಿವಕುಮಾರ ಸೇರಿ ರಾಜ್ಯದ ಸಚಿವರ ಮೇಲೆ ಮಹಾರಾಷ್ಟ್ರ ಪೊಲೀಸರು ನಡೆದುಕೊಂಡು ರೀತಿ ಸರಿಯಲ್ಲ. ಶಾಸಕ ಸುಧಾಕರ ಅವರೊಂದಿಗೆ ವಿಧಾನಸಭೆಯಲ್ಲಿ ನಡೆದ ಗೂಂಡಾವರ್ತನೆಯು ರಾಜ್ಯದ ಜನತೆಯು ತಲೆ ತಗ್ಗಿಸುವಂತೆ ಮಾಡಿದೆ ಎಂದರು.

ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶಾರದಾ ಹಿರೇಮಠ ಮಾತನಾಡಿ, ಸತತ ಮೂರು ವರ್ಷಗಳ ಕಾಲ ಬರಗಾಲದಿಂದ ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ವಣವಾಗಿದೆ. ಆದರೆ, ಶಾಸಕರು ತಮ್ಮ ಅಧಿಕಾರದ ದಾಹಕ್ಕಾಗಿ ಜನತೆಯ ಆಶೋತ್ತರಗಳನ್ನು ಬಲಿ ಕೊಡುತ್ತಿದ್ದಾರೆ. ಈ ಹದಿನಾಲ್ಕು ಜನರ ಶಾಸಕರುಗಳ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದರೂ ಅವರಿಗೆ ಎಳ್ಳಷ್ಟೂ ಚಿಂತೆಯಿಲ್ಲ ಎಂದು ದೂರಿದರು.

ತಾಲೂಕಾಧ್ಯಕ್ಷ ಪ್ರವೀಣ ಕಾಗದ ಮಾತನಾಡಿ, ವಿಧಾನ ಸಭಾ ಅಧ್ಯಕ್ಷರು ಶಾಸಕರುಗಳಿಗೆ ಬುದ್ಧಿವಾದ ಹೇಳಬೇಕು. ಇಲ್ಲವೇ ಮತ್ತೆ ಚುನಾವಣೆಗೆ ನಿಲ್ಲದಂತೆ ಇವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಸುರೇಶ ಮುರಾರಿ, ಸುಮಾ ಪುರದ, ದಿಲ್ಶ್ಯಾದ ನೀಲಗಾರ, ರೇಣುಕಾ ವೀರಾಪುರ, ಸವಿತಾ ದೈವಜ್ಞ, ರೇಣುಕಾ ಗಾಣಿಗೇರ, ರುಕ್ಮವ್ವ ಲಮಾಣಿ, ಸುರೇಶ ಜಾಲಣ್ಣನವರ, ಗಂಗಾಧರ ಇಂಗಳಗೊಂದಿ, ದೇವೆಂದ್ರಪ್ಪ ಮುಗಳಿ, ಪ್ರಕಾಶ ತಹಶೀಲದಾರ್ ಇತರರಿದ್ದರು.

Leave a Reply

Your email address will not be published. Required fields are marked *