ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ, ರೈತ, ಪ್ರಗತಿಪರ ಸಂಘಟನೆಗಳ ಒಕ್ಕೂಟ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಂತ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ರಾಜ್ಯದಲ್ಲಿ ಜೀತ ಪದ್ಧತಿಗೆ ನಿಷೇಧವಿದ್ದರೂ, ಜಿಲ್ಲೆಯಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಇದಕ್ಕೆ ಬೆಕ್ಕಳಲೆ ಮತ್ತು ಹಂಗರಹಳ್ಳಿ ಪ್ರಕರಣ ಸಾಕ್ಷಿ. ಹಂಗರಹಳ್ಳಿಯಲ್ಲಿ ಕೂಲಿ ಕಾರ್ಮಿಕ ಕರಿಯಪ್ಪ ಮಾದರ್ ಮೃತಪಟ್ಟು ಎರಡು ವಾರ ಕಳೆದರೂ, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ನೈಸರ್ಗಿಕ ಸಂಪತ್ತಿನ ಲೂಟಿಯ ಜತೆಗೆ, ಸಾವು-ನೋವು ಉಂಟಾಗುತ್ತಿವೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರಿಯಪ್ಪ ಮಾದರ್ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದರ ಜತೆಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಪ್ರಕರಣ ದಾಖಲಿಸಿ, ಅಧಿಕೃತ ಪರವಾನಗಿದಾರರ ಪಟ್ಟಿ ಬಿಡುಗಡೆ ಮಾಡಬೇಕು. ಕುಡಿಯುವ ನೀರು, ಪರಿಸರ, ಕೃಷಿ ಉಳಿವಿಗಾಗಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ನಗರ ತಾಲೂಕಿನಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಜೀತಗಾರರನ್ನು ಪತ್ತೆ ಮಾಡಿ ಜೀತ ವಿಮುಕ್ತಿಗೊಳಿಸಬೇಕು. ಜೀತಗಾರರ ಪತ್ತೆಗೆ ವಿಶೇಷ ಜಾಗೃತದಳ ರಚಿಸಬೇಕು. ವಲಸಿಗ ಕಾರ್ಮಿಕರನ್ನು ಗುರುತಿಸಿ ಜಾಬ್‌ಕಾರ್ಡ್ ವಿತರಿಸಬೇಕು. ಕಲ್ಲಿನ ಕ್ವಾರಿ, ಆಲೆಮನೆ, ಇಟ್ಟಿಗೆಗೂಡು, ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ದಿನಗೂಲಿ ನಿಗದಿಪಡಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಎಎಸ್ಪಿ ಲಾವಣ್ಯ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಶಂಭೂನಹಳ್ಳಿ ಸುರೇಶ್, ಗುರುಪ್ರಸಾದ್ ಕೆರಗೋಡು, ಅಂದಾನಿ ಸೋಮನಹಳ್ಳಿ, ಪ್ರಕಾಶ್ ಬ್ಯಾಡರಹಳ್ಳಿ, ಸಿ.ಕುಮಾರಿ, ಎಂ.ಕೃಷ್ಣಮೂರ್ತಿ ಇತರರಿದ್ದರು.