ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

ತಾಲೂಕಿನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಉಣಕಲ್ ಮಾತನಾಡಿ, ಇಲ್ಲಿನ ಕೆವಿಜಿ ಬ್ಯಾಂಕ್, ಅಂಚೆ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳಿವೆ. ನಿತ್ಯ ಕೇವಲ 20- 40 ಜನರಿಗೆ ಅವಕಾಶವಿರುವುದರಿಂದ ಬೇರೆ ಊರುಗಳಿಂದ ಬರುವ ಜನ ಅಲೆದಾಡಬೇಕಾಗಿದೆ. ಕೆಲಸ ಬಿಟ್ಟು ದಿನವಿಡೀ ಸರದಿಯಲ್ಲಿ ನಿಂತರೂ ಸೇವೆ ದೊರೆಯದಾಗಿದೆ. ಸರದಿಯಲ್ಲಿ ನಿಂತ ಎಲ್ಲರಿಗೂ ಆಧಾರ್ ಸೇವೆ ಲಭ್ಯವಾಗುವಂತೆ ವ್ಯವಸ್ಥೆ ಸುಧಾರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಮುಜೀಬ್ ಬಳಿಗಾರ, ರಾಜು ಜವಳಿ, ಕುಮಾರ ಬಣಕಾರ, ಅಸ್ಲಾಂ ಮಕಾನ್ದಾರ್, ಮಾರುತಿ ಎಸ್., ಶರತ್ ಪೂಜಾರ, ಚಂದ್ರು ಹಂಪಾಳಿ, ಅಣ್ಣಪ್ಪ ಬಡಿಗೇರ, ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *