ಬಳ್ಳಾರಿ ವಿಭಜನೆ ವಿರೋಧಿಸಿ 23ರಿಂದ ಹೋರಾಟ

ಬಳ್ಳಾರಿ: ವಿಜಯನಗರ ಹೆಸರಿನಲ್ಲಿ ಬಳ್ಳಾರಿಯನ್ನು ವಿಭಜಿಸದೆ ಅಖಂಡ ಜಿಲ್ಲೆಯಾಗಿ ಉಳಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಸೆ. 23ರಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡರು ತಿಳಿಸಿದರು.

ನಗರದಲ್ಲಿ ಶನಿವಾರ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರಾದ ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ದರೂರು, ಮಾಜಿ ಉಪ ಮೇಯರ್ ಶಶಿಕಲಾ, ಕಾಂಗ್ರೆಸ್ ಮುಖಂಡ ಕುಡತಿನಿ ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೊಸಪೇಟೆ ಕೇಂದ್ರಿತವಾಗಿ ನೂತನ ವಿಜಯನಗರ ಜಿಲ್ಲೆ ರಚನೆ ಮಾಡಬಾರದು. ಜಿಲ್ಲೆಯ ಜನಪ್ರತಿನಿಧಿಗಳ ಸಲಹೆ ಪಡೆಯದೆ ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲ. ಅನರ್ಹರಾಗಿರುವ ಶಾಸಕ ಆನಂದ್ ಸಿಂಗ್ ಹಿತ ಕಾಪಾಡಲು ಜಿಲ್ಲೆಯ ವಿಭಜನೆ ನಿರ್ಧಾರ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯಡಿಯೂರಪ್ಪ ಆನಂದ್ ಸಿಂಗ್ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಸಂಘ ಸಂಸ್ಥೆಗಳ, ಸಾಹಿತಿಗಳ, ಕಲಾವಿದರ, ಕಾರ್ಮಿಕ ಒಕ್ಕೂಟಗಳ, ರೈತ ಸಂಘಟನೆಯವರ, ಕನ್ನಡ ಪರ ಸಂಘಟನೆಗಳ ಸಲಹೆ ಪಡೆಯದೆ ದಿಢೀರ್ ನಿರ್ಧಾರ ಮಾಡಬಾರದು. ಜಿಲ್ಲೆ ವಿಭಜನೆ ವಿರೋಧಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ, ಬುಧವಾರ ಉಪವಾಸ ಸತ್ಯಾಗ್ರಹ, ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ನೂತನ ತಾಲೂಕುಗಳಿಗೆ ಇನ್ನೂ ಸೌಲಭ್ಯಗಳು ಸಿಕ್ಕಿಲ್ಲ. ಇನ್ನು ಹೊಸ ಜಿಲ್ಲೆ ರಚನೆಯಾದರೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.

ಗಣಿ ಉದ್ಯಮಿ ಟಪಾಲ್ ಗಣೇಶ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಕನ್ನಡ ಕ್ರಾಂತಿ ದಳದ ಅಧ್ಯಕ್ಷ ಶಾಂತನಗೌಡ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *