More

  ಜೆ.ಸಿ.ಪ್ರಕಾಶ ವರದಿ ಜಾರಿ ವಿರೋಧಿಸಿ ಮಾರ್ಚ್‌ 16 ರಂದು ಪ್ರತಿಭಟನೆ

  ಕಾರವಾರ: ಉತ್ತರ ಕನ್ನಡದ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು, ಈ ಸಂಬಂಧ ಅಧ್ಯಯನ ನಡೆಸಿ, ಸರ್ಕಾರಕ್ಕೆ ಸಲ್ಲಿಕೆಯಾದ ಜೆ.ಸಿ.ಪ್ರಕಾಶ ಸಮಿತಿ ವರದಿ ಜಾರಿ ಮಾಡಬಾರದು ಎಂದು ಒತ್ತಾಯಿಸಿ ಮಾ.16 ರಂದು ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯ ದೀಪಕ್ ಕುಡಾಳಕರ್ ತಿಳಿಸಿದರು.
  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ವಿಚಾರ 2006 ರಿಂದಲೂ ಚರ್ಚೆಯಲ್ಲಿದೆ. ಸುಪ್ರೀಂ ಕೋರ್ಟ್ನಲ್ಲೂ ಈ ಸಂಬಂಧ ವಿಚಾರಣೆ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐಎಎಸ್ ಅಧಿಕಾರಿ ಜೆ.ಸಿ.ಪ್ರಕಾಶ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಜೆ.ಸಿ.ಪ್ರಕಾಶ ಅವರು ಅಧ್ಯಯನ ನಡೆಸಿದ್ದು, ಗುರುವಾರ ಸಿಎಂ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದ್ದಾಗಿ ತಿಳಿದುಬಂದಿದೆ. ವರದಿ ಜಾರಿಯನ್ನು ನಾವು ವಿರೋಧಿಸುತ್ತಿದ್ದು, ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.
  ದಸಂಸ ಜಿಲ್ಲಾ ಸಂಚಾಲಕ ತುಳಸಿದಾಸ ಪಾವಸ್ಕರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮೊಗೇರರ ಸಮುದಾಯದ ಬಗ್ಗೆ ಎಚ್.ಕೆ.ಭಟ್ ಎಂಬುವವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವಿಸ್ತ್ರತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ನ್ಯಾಯಾಲಯಗಳೂ ಈ ವರದಿಯನ್ನು ಪರಿಶೀಲಿಸಿ ತೀರ್ಪು ನೀಡಿವೆ. ಮೊಗೇರ ಸಮುದಾಯವರು ಮೀನುಗಾರರಾಗಿದ್ದು, ಹಿಂದುಳಿದ ಪ್ರವರ್ಗ1 ಕ್ಕೆ ಸೇರಿದವರು ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಗಣಿಸಿದೆ. ಮೊಗೇರ ಸಮುದಾಯದ ಹಲವರು ಪಡೆದುಕೊಂಡಿದ್ದ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು ರದ್ದು ಮಾಡಿದೆ. ಸರ್ಕಾರಿ ಉದ್ಯೋಗದಿಂದ ವಜಾ ಮಾಡಿ, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಹಲವು ಮೊಗೇರರು ಪ್ರವರ್ಗ 1 ಜಾತಿ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದಾರೆ. ಹೀಗಿರುವಾಗ ಹೊಸ ವರದಿಯೊಂದನ್ನು ತಂದು ನಿಜ ಪರಿಶಿಷ್ಟರಿಗೆ ಅನ್ಯಾಯ ಮಾಡುವ ಯತ್ನ ನಡೆಯುತ್ತಿದೆ ಎಂದರು.
  ವಕೀಲ ರವೀಂದ್ರ ಮಂಗಳ, ದಸಂಸ ಪ್ರಮುಖರಾದ ಗಾರು ಮಾಂಗ್ರೆ, ಕಿರಣ ಶಿರೂರು , ಸಚ್ಚಿದಾನಂದ ಬೋರ್ಕರ್, ಸಂತೋಷ, ಗೋವಿಂದ ಮುಕ್ರಿ, ಚಂದ್ರಹಾಸ ಹಳ್ಳೇರ್, ರಾಜೇಂದ್ರ ಮಾದರ್, ಅಕ್ಷಯ ಭೋವಿವಡ್ಡರ್ ಸುದ್ದಿಗೋಷ್ಠಿಯಲ್ಲಿದ್ದರು.

  ಸಚಿವ ವೈದ್ಯ ರಾಜೀನಾಮೆ ನೀಡಲಿ

  ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಹಿಂದುಳಿದ ವರ್ಗದ ಮೊಗವೀರರ ಜಾತಿಯ ಪಟ್ಟಿಯಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಈ ಹಿಂದೆ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರದೊಂದಿಗೆ ಜಿಪಂ ಸದಸ್ಯ, ಉಪಾಧ್ಯಕ್ಷರಾಗಿದ್ದರು. ಅವರ ಜಾತಿ ಬದಲಾಗಿದ್ದು ಹೇಗೆ ಎಂದು ತನಿಖೆ ನಡೆಸಬೇಕು.
  ಮಂಕಾಳ ವೈದ್ಯ ಸಂವಿಧಾನಿಕ ಹುದ್ದೆಯಲ್ಲಿದ್ದು, ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಸಿಎಂ ಅವರಿಗೆ ತಪ್ಪು ಮಾಹಿತಿ ನೀಡಿ ನೈಜ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಅವರು ರಾಜೀನಾಮೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ದೀಪಕ ಕುಡಾಳಕರ್ ಹೇಳಿದರು.

  ಇದನ್ನೂ ಓದಿ: ಶಿರಸಿ ಜಾತ್ರೆ-ಬೆಳಗಿದ ಮೇಟಿ ದೀಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts