ಶಿವಪುರ ಬಡಾವಣೆ ನಿವಾಸಿಗಳ ಪ್ರತಿಭಟನೆ

ಬ್ಯಾಡಗಿ:  ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣದ ಶಿವಪುರ ಬಡಾವಣೆ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಕೀಲ ಶಂಕರ ಕುಸಗೂರು ಮಾತನಾಡಿ, ಶಿವಪುರ ಬಡಾವಣೆಯಲ್ಲಿನ ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಬಡಾವಣೆಯ ಎಲ್ಲೆಡೆ ಕಸ ಎಸೆಯಲಾಗುತ್ತಿದ್ದು, ಪ್ರತಿದಿನ ಕಸ ವಿಲೇವಾರಿಗೆ ಕಾರ್ವಿುಕರು ಬರುತ್ತಿಲ್ಲ. ಹೀಗಾಗಿ ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲಿನ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ನಿತ್ಯವೂ ಸಾರಿಗೆ ಘಟಕಕ್ಕೆ ತೆರಳುವ ನೂರಾರು ಬಸ್​ಗಳು ಧೂಳೆಬ್ಬಿಸುತ್ತ ಹೋಗುತ್ತಿವೆ. ಇದರಿಂದ ಜನಜೀವನ ಕಷ್ಟಕರವಾಗಿ ಉಸಿರುಗಟ್ಟುವ ವಾತಾವರಣ ನಿರ್ವಣವಾಗಿದೆ. ಆರು ತಿಂಗಳ ಹಿಂದೆ ಡಾಂಬರ್ ಕಿತ್ತ ಯುಜಿಡಿ ಇಂಜಿನಿಯರ್ ಇಂದಿಗೂ ಸಮರ್ಪಕವಾಗಿ ದುರಸ್ತಿ ಮಾಡಿಲ್ಲ. ಹೀಗಾಗಿ ಇಲ್ಲಿನ ಬಸ್​ಗಳ ಓಡಾಟದಿಂದ ಧೂಳಿನ ಸಮಸ್ಯೆ ಉಂಟಾಗಿದ್ದು, ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಸಾರಿಗೆ ಘಟಕಕ್ಕೆ ನಕಾಶೆಯ ಪ್ರಕಾರ ಬೇರೆಡೆ ರಸ್ತೆಯಿದ್ದು, ಆದರೆ, ಆ ಜಾಗ ಬಿಟ್ಟು ಬಡಾವಣೆಗಳಲ್ಲಿ ಬಸ್ ಓಡಿಸುತ್ತ ನಿವಾಸಿಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅವರು ಯುಜಿಡಿ ಕಾಮಗಾರಿ ಇಂಜಿನಿಯರ್ ಕರೆಯಿಸಿ, ಕೂಡಲೇ ರಸ್ತೆಯ ತಗ್ಗು-ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ಸೂಚಿಸಿದರು. ಮೂಲ ಸಾರಿಗೆ ಘಟಕದ ಮಾರ್ಗ ಸರಿಪಡಿಸಿ ಆ ಮಾರ್ಗದಲ್ಲಿ ಬಸ್​ಗಳು ಓಡಾಡಲು ಅನುವು ಮಾಡಲಾಗುವುದು. ನೀರಿನ ಸಮಸ್ಯೆ ಕುರಿತು ತಕ್ಷಣ ಪೈಪ್​ಲೈನ್ ದುರಸ್ತಿಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ನಿವಾಸಿಗಳು ಪ್ರತಿಭಟನೆ ಸ್ಥಗಿತಗೊಳಿಸಿದರು.