ಎಚ್.ಡಿ. ಕೋಟೆ : ಶುಂಠಿ ಕೂಲಿ ಕಾರ್ಮಿಕರಿಗೆ ಕೇರಳ ಮೂಲದ ಶುಂಠಿ ವ್ಯಾಪಾರಿಗಳು ಹಾಗೂ ಕಂಪನಿಗಳು ಕಡಿಮೆ ಕೂಲಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಡಿ.ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಸಂಘದ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಮೈಸೂರು-ಮಾನಂದವಾಡಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೊಪ್ಪನಹಳ್ಳಿ ಸಮೀಪವಿರುವ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಕಚೇರಿ ಮುಂಭಾಗ ನೂರಾರು ವಾಹನಗಳಲ್ಲಿ ನೂರಾರು ಕೂಲಿ ಕಾರ್ಮಿಕರು ಜಮಾಯಿಸಿ ಶುಂಠಿ ಕೀಳುವುದನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ಸಂಘದ ಅಧ್ಯಕ್ಷ ಮಗ್ಗೆ ಸುಂದ್ರ ಮಾತನಾಡಿ, ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳು ನಮ್ಮ ರಾಜ್ಯಕ್ಕೆ ಬಂದು ನಮ್ಮ ಸಂಘದ 5000 ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಶುಂಠಿ ಕಟಾವು ಮಾಡಿ 60 ಕೆಜಿ ತೂಕದ ಒಂದು ಚೀಲಕ್ಕೆ 275 ರೂ. ನೀಡುತ್ತಿದ್ದರು. ಆದರೆ ಕ್ರಮೇಣ ಕಟಾವು ಹಣವನ್ನು ಕಡಿಮೆ ಮಾಡುತ್ತಾ ಬಂದಿದ್ದು, ಒಂದು ಚೀಲಕ್ಕೆ ಈಗ 175 ರೂ.ಗಳನ್ನು ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರು ವಿಧಿಯಿಲ್ಲದೇ ಜೀವನ ನಿರ್ವಹಣೆಗಾಗಿ ಅವರು ನೀಡಿದಷ್ಟೇ ಬೆಲೆಗೆ ಶುಂಠಿ ಕಟಾವು ಮಾಡುತ್ತಿದ್ದರು. ಆದರೀಗ 175 ರಿಂದ 150 ರೂ.ಗಳಿಗೆ ಇಳಿಸಿರುವುದರಿಂದ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳಿಗೆ ಬಿಸಿ ಮುಟ್ಟಿಸುವವರೆಗೂ ನಾವು ಕಟಾವು ಮಾಡಲು ಜಮೀನುಗಳಿಗೆ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಸ್ಸಾಂ ಕಾರ್ಮಿಕರ ಲಗ್ಗೆ : ಶುಂಠಿ ಕಟಾವು ಮಾಡಲು ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಕರ್ನಾಟಕಕ್ಕೆ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಇಂದು ನಮ್ಮ ಕಾರ್ಮಿಕರನ್ನು ಕೇರಳ ಮೂಲದ ಶುಂಠಿ ಕಂಪನಿಗಳು ನಿರ್ಲಕ್ಷಿಸಿವೆ. ಸ್ಥಳೀಯ ಕೂಲಿ ಕಾರ್ಮಿಕರನ್ನು ಪರಿಗಣಿಸದ ಕೇರಳ ಮೂಲದ ಶುಂಠಿ ಕಂಪನಿಗಳಿಗೆ ನಮ್ಮ ರೈತರು ಶುಂಠಿ ಮಾರಾಟ ಮಾರಬಾರದು ಎಂದು ಅವರು ಒತ್ತಾಯಿಸಿದರು.
ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಕೇವಲ 150 ರೂ.ಗಳಿಗೆ ಒಂದು ಚೀಲವನ್ನು ಕಟಾವು ಮಾಡುತ್ತಿದ್ದಾರೆ, ಇದರಿಂದ ಸ್ಥಳೀಯರಾದ ನಮಗೆ ತೊಂದರೆ ಆಗಿದೆ. ಶಾಸಕ ಅನಿಲ್ ಚಿಕ್ಕಮಾದು ಅವರು ಮಧ್ಯಪ್ರವೇಶಿಸಿ ಶುಂಠಿ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.
ಗೌರವಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಾಮಕೃಷ್ಣ, ಬೆಟ್ಟನಾಯಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಹಕಾರ್ಯದರ್ಶಿ ಸೋಮೇಶ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮರಿಸಿದ್ದಯ್ಯ, ನಿರ್ದೇಶಕರಾಗಿ ರಾಜು, ಬೆಟ್ಟನಾಯಕ, ಮಹದೇವನಾಯಕ ತೇಜಕುಮಾರ್, ಪ್ರವೀಣ್, ಕುಮಾರ್, ಬೆಟ್ಟನಾಯಕ, ಚಿಕ್ಕಣ್ಣ, ದುಂಡರಾಜು, ಗೋವಿಂದರಾಜು ಇದ್ದರು.