ವಿದ್ಯುತ್ ಸಂಪರ್ಕಕ್ಕೆ ರೈತರ ಗಡುವು

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಸಲುವಾಗಿ ಸ್ವರ್ಣಾನದಿ ತಟದ ಹಿರಿಯಡಕ ಭಾಗದಲ್ಲಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ವಿರೋಧಿಸಿ ಹಿರಿಯಡಕ ಬಜೆ ಡ್ಯಾಂನಲ್ಲಿ ಜಿಲ್ಲಾ ಕೃಷಿಕ ಸಮಾಜ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಶನಿವಾರ ಸಾಯಂಕಾಲ ಒಳಗಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡದಿದ್ದರೆ ಮುಂದಿನ ಅನಾಹುತಕ್ಕೆ ಜಿಲ್ಲಾಡಳಿತ, ನಗರಸಭೆ, ಮೆಸ್ಕಾಂ ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೃಷಿಕ ಸಮಾಜ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಸ್ವರ್ಣಾ ನದಿ ತಟದಲ್ಲಿ 950 ಕೃಷಿಕರು, 450 ಕೃಷಿ ಕಾರ್ಮಿಕರಿದ್ದಾರೆ. ಈ ಭಾಗದ ಎಲ್ಲ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಬೆಳೆಗಳು ಬಾಡಲು ಆರಂಭಿಸಿವೆ. ರೈತ ವರ್ಗಕ್ಕೆ ಜಿಲ್ಲಾಡಳಿತ ಆರ್ಥಿಕ ನಷ್ಟ ತಂದೊಡ್ಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕೃಷಿಕರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ, ನೀರಿನ ಮಟ್ಟ ಲಭ್ಯತೆ ಅನುಸರಿಸಿ, ಮಾರ್ಚ್- ಏಪ್ರಿಲ್‌ನಲ್ಲಿ ವಾರಕ್ಕೆ 2 ಸಲ, ಮೇನಲ್ಲಿ ವಾರಕ್ಕೆ ಒಂದು ಬಾರಿಯಂತೆ ನೀರು ಬಿಡಲು ಜಿಲ್ಲಾಡಳಿತ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ಪರ್ಯಾಯ ವ್ಯವಸ್ಥೆ ಇಲ್ಲ: ಉಡುಪಿ ನಗರ ದಿನೇದಿನೆ ವಿಸ್ತಾರವಾಗುತ್ತಿದ್ದರೂ, ನಗರಸಭೆ, ಜಿಲ್ಲಾಡಳಿತ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. 1974ರಲ್ಲಿ ನಿರ್ಮಿಸಿದ ಬಜೆ ಡ್ಯಾಂನಿಂದ ನಗರಕ್ಕೆ ಕುಡಿವ ನೀರು ಪಂಪ್ ಮಾಡಲಾಗುತ್ತಿದೆ. ಪ್ರಸಕ್ತ ನಗರ ಬೆಳೆದಿದೆ, ನೀರೆತ್ತುವ ಪರ್ಯಾಯ ಮೂಲ ಹುಡುಕದೆ 50 ವರ್ಷದ ಹಿಂದಿನ ಬಜೆ ಅಣೆಕಟ್ಟನ್ನೇ ನಗರಸಭೆ ನಂಬಿಕೊಂಡಿದೆ. ನಗರ ಜನತೆಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಕೃಷಿಭೂಮಿಗೆ ನೀರು ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೃಷಿಕ ಸಮಾಜದ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಪಾಂಡುರಂಗ ನಾಯಕ್ ಹಿರಿಯಡಕ, ಭಾರತಿ ಶೆಟ್ಟಿ ಅಂಚಾರು, ಉದಯ ಭಟ್ ಮುಂಡಾಜೆ, ಅಶೋಕ ಶೆಟ್ಟಿ ಹಾಗೂ ಹಿರಿಯಡಕ ಭಾಗದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

650 ಎಕರೆ ಕೃಷಿ ಅಪಾಯದಲ್ಲಿ:
ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಕಡಿತ ಪರಿಣಾಮ ನೀರಿಲ್ಲದೆ ಈ ಭಾಗದ 650 ಎಕರೆ ಭೂಮಿಯಲ್ಲಿ ಕೈಗೊಂಡ ಕೃಷಿ ಬಾಡುವ ಸ್ಥಿತಿಗೆ ಬಂದಿದೆ ಎಂದು ಕೃಷಿಕ ಸಮಾಜದ ಕುದಿ ಶ್ರೀನಿವಾಸ್ ಭಟ್ ಆತಂಕ ವ್ಯಕ್ತಪಡಿಸಿದರು. 300 ಎಕರೆಯಲ್ಲಿ 15 ಸಾವಿರ ತೆಂಗು, 120 ಎಕರೆಯಲ್ಲಿ 60 ಸಾವಿರ ಅಡಕೆ ಮರ, 50 ಎಕರೆಯಲ್ಲಿ 20 ಸಾವಿರ ಬಾಳೆ, 10 ಎಕರೆ ತರಕಾರಿ, 200 ಎಕರೆ ಭತ್ತ ಬೆಳೆಯಲಾಗುತ್ತಿದೆ. ಕೃಷಿ ಉತ್ಪಾದನಾ ವೆಚ್ಚ 12 ಕೋಟಿ ರೂ. ಇದ್ದು, 2.30 ಕೋಟಿ ರೂ. ಸಾಲವಿದೆ. ಈ ಹೊತ್ತಲ್ಲಿ ಭೂಮಿ ತೇವಾಂಶ ಕಳೆದುಕೊಂಡರೆ ಕೃಷಿ ಕೈಕೊಟ್ಟು ರೈತರು ನಷ್ಟ ಅನುಭವಿಸುವುದು ಖಂಡಿತ ಎಂದರು.

ನಿರ್ವಹಣೆ ವೈಫಲ್ಯ: ಬಜೆ ಅಣೆಕಟ್ಟಿನಲ್ಲಿ 1.5 ಮೀ- 2 ಮೀ.ನಷ್ಟು ಹೂಳು ತುಂಬಿದ್ದು, ನಿರ್ವಹಣೆ ಕಾರ್ಯ ನಡೆದಿಲ್ಲ. ಸ್ವರ್ಣಾ 2ನೇ ಹಂತ ಸಂಪೂರ್ಣ ವಿಫಲವಾಗಿದ್ದು, ನೀರು ಸೋರಿಕೆ ಸರಿಪಡಿಸಲು ಅಧಿಕಾರಿಗಳಿಂದ ಆಗಿಲ್ಲ. ನಗರ ಪ್ರದೇಶದ ಕುಡಿಯುವ ನೀರನ್ನು ಕಟ್ಟಡ ನಿರ್ಮಾಣ, ತೋಟಕ್ಕೆ ಬಳಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಜೆ ಡ್ಯಾಂ ನಿರ್ವಹಣೆ, ನಗರದ ಕುಡಿಯುವ ನೀರಿನ ವಿಚಾರದಲ್ಲಿ ನಗರಸಭೆ, ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇದರ ನೇರ ಪರಿಣಾಮವನ್ನು ಪ್ರಸಕ್ತ ರೈತರು ಎದುರಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.