ಸಿನಿಮಾ

ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹ: ನಗರದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

ಮಂಡ್ಯ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘ(ಎಸ್‌ಎಫ್‌ಐ) ಸಂಘಟನೆಯ ಕಾರ್ಯಕರ್ತರು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಘೋಷಣೆ ಮೊಳಗಿಸಿದರು.
ಲೈಂಗಿಕ ಕಿರುಕುಳದ ವಿರುದ್ಧ ಒಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಕುಸ್ತಿ ಕ್ರೀಡಾಪಟುಗಳು 2023 ಏ.24ರಿಂದ ದೆಹಲಿಯ ಜಂತರ್ ಮಂಥರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸ್ ದೂರು ನೀಡಿದ್ದರೂ ಎಫ್‌ಐಆರ್ ದಾಖಲಾಗಿರಲಿಲ್ಲ, ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ನಂತರವಷ್ಟೇ ಎಫ್‌ಐಆರ್ ದಾಖಲಾಗಿದೆ. ಕುಸ್ತಿಪಟುಗಳು ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಮಾತ್ರ ಕೇಳುತ್ತಿದ್ದಾರೆ. ಕುಸ್ತಿಪಟುಗಳ ಆರೋಪದ ಹಿನ್ನೆಲೆಯಲ್ಲಿ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿ.ಕೆ.ಲತಾ, ಸುಶೀಲಾ, ಬಿ.ಹನುಮೇಶ್, ಎಂ.ಶಿವಕುಮಾರ್, ಸಿ.ಕುಮಾರಿ, ದೇವಿ, ಅಮಾವಸಯ್ಯ, ಸುರೇಂದ್ರ, ಭರತ್‌ರಾಜ್ ಇತರರಿದ್ದರು.

Latest Posts

ಲೈಫ್‌ಸ್ಟೈಲ್