More

  ರೈತರಿಗೆ ಪರಿಹಾರ ನೀಡದೆ ಅನ್ಯಾಯ

  ಶ್ರೀರಂಗಪಟ್ಟಣ: ರಾಜ್ಯದಲ್ಲಿ ಬರಗಾಲ ಉಂಟಾಗಿ ಕೃಷಿಯಲ್ಲಿ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡದೆ ಕಾಂಗ್ರೆಸ್ ಸರ್ಕಾರ, ಕೇಂದ್ರ ನೀಡಿದ 4400 ಕೋಟಿ ರೂ. ಪರಿಹಾರ ಹಂಚಿಕೆಯಲ್ಲಿ ಮೋಸ ಮಾಡುತ್ತಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆರೋಪ ಮಾಡಿದರು.

  ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ನಡೆದ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದ ಬಳಿಕ ರೈತರು ಹಾಗೂ ರೈತಾಪಿ ಶ್ರಮಿಕರನ್ನು ಇನ್ನಿಲ್ಲದಂತೆ ಶೋಷಣೆಗೆ ಒಳಪಡಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 80 ಅಡಿ ನೀರಿದ್ದರೂ, ದೌರ್ಜನ್ಯದ ನಡೆಯಿಂದ ಕಾವೇರಿ ಕಣಿವೆಯ ರೈತರ ಕೃಷಿಗೆ ನೀರು ಹರಿಸಿದೆ ಬರಡು ಭೂಮಿಯನ್ನಾಗಿಸಿದೆ. ಆಧುನೀಕರಣದ ನೆಪದಲ್ಲಿ ನಾಲೆಗಳಿಗೆ ನೀರು ಹರಿಸದೆ, ತೆಂಗು ಹಾಗೂ ಅಡಿಕೆ ಬೆಳೆ ಒಣಗುವಂತೆ ಮಾಡಿ ರೈತರನ್ನು ಸಾಲದ ಸುಳಿಗೆ ನೂಕಿದೆ ಎಂದು ದೂರಿದರು.

  ಬರದಿಂದ ಉಂಟಾಗಿರುವ ಬೆಳೆ ನಷ್ಟದ ಕುರಿತು ಸಮೀಕ್ಷೆಯನ್ನೇ ನಡೆಸದಿರುವ ಕಾಂಗ್ರೆಸ್ ಸರ್ಕಾರ, ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ 4400 ಕೋಟಿ ರೂ.ಗಳಲ್ಲಿ ಜಿಲ್ಲೆಗೆ ಕೇವಲ 34 ಕೋಟಿ ರೂ. ನೀಡುವ ಮೂಲಕ ಹಣ ಹಂಚಿಕೆಯಲ್ಲೂ ಮೋಸ ಮಾಡುತ್ತಿದೆ. ಅಂದಾಜಿನ ಪ್ರಕಾರ ರಾಜ್ಯ 31 ಜಿಲ್ಲೆಗಳಿಗೆ 125 ಕೋಟಿ ರೂ. ಹಂಚಬೇಕಿದ್ದ ಸರ್ಕಾರ, ತನ್ನ ಖಜಾನೆಯಿಂದ ಬಿಡಿಗಾಸನ್ನೂ ನೀಡದೆ ಕೇಂದ್ರದ ಪರಿಹಾರದ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿರುವುದು ನಾಚೀಕೆಗೇಡು ಎಂದು ಕಿಡಿಕಾರಿದರು.

  ಶೀಘ್ರವೇ ಜಿಲ್ಲೆಗೆ ಸೂಕ್ತ ಬರ ಪರಿಹಾರ ವಿತರಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  ಪ್ರತಿಭಟನೆಯಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಹನಿಯಂಬಾಡಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಸಮಿತಿ ಸದಸ್ಯರಾದ ಮಹಾಲಿಂಗು, ಶ್ರೀಧರ್, ರವಿಲಕ್ಷ್ಮಣ, ಪಾಲಹಳ್ಳಿ ರಾಮಚಂದ್ರು, ಚಿಂದಗಿರಿಕೊಪ್ಪಲು ರಾಮಚಂದ್ರು, ಕೂಡಲಕುಪ್ಪೆ ಸ್ವಾಮಿಗೌಡ, ತಗ್ಗಳ್ಳಿ ಯಜಮಾನ್ ಮಹದೇವು ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts