ಮೈಸೂರು: ಜೆಎನ್ಯುು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಕಂಡು ಬಂದ ‘ಫ್ರೀ ಕಾಶ್ಮೀರ’ ಪೋಸ್ಟರ್ಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ‘ದೇಶ ದ್ರೋಹ’ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ ಹಾಗೂ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಸೂಚನೆ ಮೇರೆಗೆ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದವರು ಮತ್ತು ಫ್ರೀ ಕಾಶ್ಮೀರ್ ಪೋಸ್ಟರ್ ಹಿಡಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
ಜೆಎನ್ಯುು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್ಎಫ್ಐ, ಎಐಡಿಎಸ್ಒ ಸಂಘಟನೆಗಳು ಮಾನಸಗಂಗೋತ್ರಿಯ ಗಡಿಯಾರ ಕಂಬದಿಂದ ಕುವೆಂಪು ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿದವು. ಮೆರವಣಿಗೆಯಲ್ಲಿ ‘ಫ್ರೀ ಕಾಶ್ಮೀರ’ ಪೋಸ್ಟರ್ ಹಿಡಿದ ಯುವತಿಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ವಿಚಾರ ತಿಳಿದ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಕುಲಸಚಿವ ಶಿವಪ್ಪ ಅವರಿಗೆ ಗುರುವಾರ ಲಿಖಿತ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದು, ಕುಲಸಚಿವರು ಪ್ರತಿಭಟನೆ ಸಂಘಟಿಸಿದವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ವರದಿ ಕೇಳಿದ ರಾಜ್ಯಪಾಲರು
ಪೋಸ್ಟರ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯಪಾಲ ವಿ.ಆರ್. ವಾಲಾ ಕುಲಸಚಿವ ಅರ್. ಶಿವಪ್ಪಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ವಿವಿಯ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರು ಉಳಿದುಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದ್ದು, ಆ ಬಗ್ಗೆಯೂ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುತ್ತಿದೆ.
ಪೋಸ್ಟರ್ ಪ್ರದರ್ಶಿಸಿದ್ದು ತಮಿಳುನಾಡು ಯುವತಿ
ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ್ದು ತಮಿಳುನಾಡು ಮೂಲದ ಯುವತಿ ಎಂಬುದು ಬೆಳಕಿಗೆ ಬಂದಿದೆ. ಯುವತಿ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿನಿಯಾಗಿದ್ದು, ವ್ಯಾಸಂಗ ಮುಗಿದ ನಂತರ ಮೈಸೂರಿನಲ್ಲಿಯೇ ನೆಲೆಸಿದ್ದಾಳೆ. ಎಡಪಂಥೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿರುವ ಯುವತಿ ಹಲವಾರು ಪ್ರತಿಭಟನೆ, ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದಾಳೆ.
ಅನುಮತಿ ಪಡೆದಿಲ್ಲ
ಪ್ರತಿಭಟನೆಗೆ ಪೊಲೀಸರ ಅನುಮತಿ ಪಡೆದಿಲ್ಲ. ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಪೋಸ್ಟರ್ ಪ್ರದರ್ಶಿಸಿರುವುದು ಕಂಡು ಬಂದಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮರಿದೇವಯ್ಯ ಮತ್ತು ಇತರರು ರಾಜದ್ರೋಹದಂತಹ ಕಾನೂನು ಬಾಹಿರ ಪೋಸ್ಟರ್ ಪ್ರದರ್ಶನ ಮಾಡಿದ್ದಾರೆ ಎಂಬ ಉಲ್ಲೇಖ ಎಫ್ಐಆರ್ ಪ್ರತಿಯಲ್ಲಿ ಇದೆ.