ವಿಜಯವಾಣಿ ಸುದ್ದಿಜಾಲ ಹಿರೇಕೆರೂರ
ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿನ ಅವ್ಯವಸ್ಥೆ ಖಂಡಿಸಿ ರೈತ ಸಂಘದ ತಾಲೂಕು ಘಟಕದಿಂದ (ಕೆ.ಎಸ್. ಪುಟ್ಟಣ್ಣಯ್ಯ ಬಣ) ಸ್ಥಳೀಯ ಎಸ್ಬಿಐ ಶಾಖೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಇಲ್ಲಿನ ಎಸ್ಬಿಐ ಬ್ಯಾಂಕ್ ಶಾಖೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿಲ್ಲ. ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದ್ದು, ಬ್ಯಾಂಕ್ ವ್ಯವಸ್ಥಾಪಕರು, ಅಧಿಕಾರಿಗಳು ಗ್ರಾಹಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. 49 ಸಾವಿರ ಗ್ರಾಹಕರನ್ನು ಹೊಂದಿದ ಈ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿದ್ದು, ಸಣ್ಣ ಕೆಲಸಕ್ಕೂ ಗ್ರಾಹಕರು ದಿನವಿಡೀ ಕಾಯಬೇಕಾದ ಅನಿವಾರ್ಯತೆ ಇದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೃಷಿಗಾಗಿ ಎಡಿಬಿ ಬ್ಯಾಂಕ್ ಮಂಜೂರು ಮಾಡಬೇಕು. ಗ್ರಾಹಕರಿಗೆ ತೊಂದರೆಯಾಗದಂತೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ನಿರದ್ಯೋಗಿ ಯುವಕರ ಶೈಕ್ಷಣಿಕ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿ ಬ್ಯಾಂಕ್ ವ್ಯವಸ್ಥಾಪಕ ಕೀರ್ತಿಸಿಂಹ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರೂ, ‘ಜನರಲ್ ಮ್ಯಾನೇಜರ್ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ನಂತರ ಆಗಮಿಸಿದ ಜನರಲ್ ಮ್ಯಾನೇಜರ್ ಸುರೇಶ ಎಸ್.ಎಸ್. ಅವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಕಾರ್ಯದರ್ಶಿ ಗಂಗನಗೌಡ ಮುದಿಗೌಡ್ರ, ಎಸ್.ವಿ. ಚಪ್ಪರದಹಳ್ಳಿ, ಶಾಂತನಗೌಡ ಪಾಟೀಲ, ಯಶವಂತ ತಿಮ್ಮಾಪುರ, ಶಂಕ್ರಪ್ಪ ಶಿರಗಂಬಿ, ಕರಬಸಪ್ಪ ಬಸಾಪುರ, ಬಸನಗೌಡ ಗಂಗಪ್ಪನವರ, ಫಯಾಜ್ ದೊಡ್ಮನಿ, ಮೌನೇಶ ಅರ್ಕಾಚಾರಿ, ಹನುಮಂತ ಜೊಗೇರ, ಪಿ.ಎಚ್. ಪಾಟೀಲ, ಇತರರು ಇದ್ದರು.