ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯವಿಜಯವಾಣಿ ಸುದ್ದಿಜಾಲ ಮಡಿಕೇರಿ
ರಾಜ್ಯದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಹಮಾಲಿ ಫೆಡರೇಷನ್ ಕೊಡಗು ಸಮಿತಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಮಿತಿ ರಾಜ್ಯಾಧ್ಯಕ್ಷ ಮಹಂತೇಶ್ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ಮಹತ್ವ ಪಾತ್ರ ವಹಿಸುವ ಶ್ರಮ ಜೀವಿಗಳಾದ ಹಮಾಲಿ ಕಾರ್ಮಿಕರು, ರಾಜ್ಯದ ಕೆ.ಪಿ.ಮಾರುಕಟ್ಟೆ, ಅಕ್ಕಿ, ಆಯಿಲ್ ಮೊದಲಾದ ಗಿರಣಿಗಳು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಬಜಾರ್‌ಗಳಲ್ಲಿ ಸುಮಾರು 5 ಲಕ್ಷ ಕಾರ್ಮಿಕರು ಅತ್ಯಂತ ಭಾರವಾದ ಮೂಟೆಗಳನ್ನು ಹೊತ್ತು ಶ್ರಮಿಸುತ್ತಿದ್ದಾರೆ. ಇಂತಹ ಶ್ರಮ ಜೀವಿಗಳಿಗೆ ಸರ್ಕಾರ ಯಾವುದೇ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಅಸಂಘಟಿತ ಕಾರ್ಮಿಕರಲ್ಲಿ ಶ್ರಮದಾಯಕ ಕೆಲಸ ನಿರ್ವಹಿಸುವ ಇವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಸ್ವಂತ ನಿವೇಶನ, ಮನೆಗಳು ಇಲ್ಲದೆ ಸರ್ಕಾರದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರು ಉತ್ತಮ ಬದುಕಿಗೆ ಸರ್ಕಾರ ವಿವಿಧ ಸೌಲಭ್ಯವನ್ನು ಘೋಷಿಸಬೇಕು. ಸಮಿತಿಯು ರಾಜ್ಯಾದ್ಯಂತ ಕೆಲವು ವರ್ಷಗಳಿಂದ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇವುಗಳನ್ನು ಪರಿಹರಿಸಲು ಈ ಹಿಂದಿನ ಸರ್ಕಾರಗಳು ತಕ್ಕ ಮಟ್ಟಿನ ಗಮನ ನೀಡಿದೆಯಾದರೂ ಹಮಾಲಿ ಕಾರ್ಮಿಕರ ಪ್ರಮುಖ ಬೇಡಿಕೆಗಳು ಹಾಗೆಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಬಹುತೇಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರುವ ಬಡ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸಲು ಸರ್ಕಾರ ಕ್ರಮ ವಹಿಸಬೇಕು. ಮುಖ್ಯ ಮಾರುಕಟ್ಟೆ ಮತ್ತು ಆಪ್ತ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಜಾಗಗಳನ್ನು ವಸತಿ ಯೋಜನೆಗಾಗಿ ಗುರುತಿಸಬೇಕು. ಮಾರುಕಟ್ಟೆಗಳಲ್ಲಿ ಜಾಗದ ಲಭ್ಯತೆ ಇಲ್ಲದ ಪಕ್ಷದಲ್ಲಿ ಸರ್ಕಾರಿ ಅಥವಾ ಖಾಸಗಿ ಜಮೀನನ್ನು ಖರೀದಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಪ್ರಧಾನಮಂತ್ರಿ ಆವಾಸ್, ದೇವರಾಜ ಅರಸು ವಸತಿ ಯೋಜನೆಗಳನ್ನು ಬಳಸಿಕೊಂಡು ಕೂಡಲೇ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಿ ಜಾರಿ ಮಾಡಬೇಕು. ಭವಿಷ್ಯನಿಧಿ ಯೋಜನೆ ತಕ್ಷಣದಿಂದ ಜಾರಿ ಮಾಡಬೇಕು. ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲ. ಅರ್ಜಿ ಸಲ್ಲಿಸಿದ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಹಸನಬ್ಬ, ಪದಾಧಿಕಾರಿ ಗೋಪಾಲ ಕೃಷ್ಣ, ಕೆ.ಎಸ್.ಶಾಜಿ, ಬಸೀರ್, ಕರೀಂ ಹಾಜರಿದ್ದರು.

12ಆದರ್ಶ್‌ಕೆಡಿಜಿಎ1: ರಾಜ್ಯ ಹಮಾಲಿ ಫೆಡರೇಷನ್ ಕೊಡಗು ಸಮಿತಿ ಪದಾಧಿಕಾರಿಗಳು ರಾಜ್ಯದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
=-=-=-=-=-=-=-=-=-=-=-=-=-=-=-=-=-=-

Leave a Reply

Your email address will not be published. Required fields are marked *