ಮೈಸೂರು: ರೈತರಿಂದ ಟ್ರಾೃಕ್ಟರ್ ಜಪ್ತಿ ಮಾಡುವುದನ್ನು ತಕ್ಷಣವೇ ಕೈ ಬಿಡದಿದ್ದರೆ ಪಿಎಲ್‌ಡಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ಬರ ಹಾಗೂ ಜಲಪ್ರಳಯದಿಂದ ರೈತರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಯಾರೂ ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂದು ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೂ ಸರ್ಕಾರದ ಅಧೀನದಲ್ಲಿರುವ ಪಿಎಲ್‌ಡಿ ಬ್ಯಾಂಕ್ ನವರು ಯಾವುದೇ ಮುನ್ಸೂಚನೆ ನೀಡದೆ ರೈತರಿಂದ ಬಲವಂತವಾಗಿ ಟ್ರಾೃಕ್ಟರ್ ಅನ್ನು ಜಪ್ತಿ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ರೈತರ ಸಮಸ್ಯೆಯನ್ನು ಮನಗಂಡಿರುವ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಫೈನಾನ್ಸ್ ಕಂಪನಿಗಳು ಬಡ್ಡಿ ಮನ್ನಾ ಅಥವಾ ಸಾಲದಲ್ಲೇ ಸ್ವಲ್ಪ ಭಾಗ ಕಡಿತ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿವೆ. ಆದರೆ ಸರ್ಕಾರದ ಅಧೀನದಲ್ಲಿರುವ ಪಿಎಲ್‌ಡಿ ಬ್ಯಾಂಕ್‌ಗಳ ಈ ಕ್ರಮ ಸರಿಯಲ್ಲ ಎಂದರು.
ಈಗಾಗಲೇ ಎಚ್.ಡಿ.ಕೋಟೆ ತಾಲೂಕಿನಲ್ಲಿ 7, ಮಂಡ್ಯದಲ್ಲಿ 9, ತುಮಕೂರಿನಲ್ಲಿ 13 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಇತ್ತ ಗಮನಹರಿಸಿ ಪಿಎಲ್‌ಡಿ ಬ್ಯಾಂಕ್‌ಗಳಲ್ಲಿರುವ 1,600 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರಿಂದ ಜಪ್ತಿ ಮಾಡಿ ಅಧಿಕಾರಿಗಳು ಹರಾಜು ಪ್ರಕ್ರಿಯೆ ಮುಂದಾಗಿರುವ ಟ್ರ್ಯಾಕ್ಟರ್‌ಗಳನ್ನು ಯಾರು ಕೂಡ ಖರೀದಿ ಮಾಡಬಾರದು ಎಂದ ಅವರು, ಟ್ರ್ಯಾಕ್ಟರ್ ಜಪ್ತಿಗೆ ಅಧಿಕಾರಿಗಳು ಮುಂದಾದರೆ ಕೂಡಲೇ ಸ್ಥಳೀಯ ರೈತ ಸಂಘಟನೆಗಳಿಗೆ ರೈತರು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಜೆಎನ್‌ಯು ಪ್ರಕರಣ ಖಂಡಿಸಿ ಗಂಗೋತ್ರಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ಪ್ರಕರಣದ ದಾಖಲಿಸಿರುವುದು ಸರಿಯಲ್ಲ. ದೇಶದ ಸಮಗ್ರತೆ ವಿರೋಧಿಸುವುದು ಪ್ರತಿಭಟನೆಯ ಉದ್ದೇಶವಲ್ಲ. ಹಾಗಾಗಿ ಸೂಕ್ತ ತನಿಖೆ ನಡೆಸಿ ನಿರಪರಾಧಿಗಳ ವಿರುದ್ಧದ ಪ್ರಕರಣ ಕೈಬಿಡಬೇಕು. ಅಲ್ಲದೆ ಜನರಿಗೆ ತೊಂದರೆಯಾಗುವ ಎನ್‌ಆರ್‌ಸಿ, ಸಿಎಎ ವಿರೋಧಿಸಿ ವಿವಿಧ ಸಂಘಟನೆಗಳಿಂದ ‘ನಾವು ಭಾರತೀಯರು’ ಎನ್ನುವ ಸಂಘಟನೆಯನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಪವರ್ ಗ್ರಿಡ್ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ರೈತರ ಹೋರಾಟ ಗಮನಿಸಿ ಮಾರ್ಗವನ್ನು ಮರು ಪರಿಶೀಲಸುವ ಕುರಿತು ಸಂಬಂಧಿಸಿದವರಿಗೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ವರದಿ ಬಂದ ಬಳಿಕ ಮುಂದಿನ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ, ಚಂದ್ರೇಗೌಡ, ಮಂಡಕಳ್ಳಿ ಮಹೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.