ಸಂಸದರ ಮನೆತನಕ ಪಾದಯಾತ್ರೆ

ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಕೊಪ್ಪಳದ ಸಂಸದ ನಿವಾಸಕ್ಕೆ ಪಾದಯಾತ್ರೆ ಬುಧವಾರ ಆರಂಭಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಕಳೆದ 6 ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯ ಸಮಿತಿ ಕರೆ ಮೇರೆಗೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ನಗರದ ತಾಪಂ ಕಚೇರಿಯಿಂದ ಆರಂಭಿಸಿದರು. ನೇತೃತ್ವ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಖಾತ್ರಿ ಯೋಜನೆ ಅನುದಾನ ಕಡಿತಗೊಳಿಸಿದೆ. ಕೆಲಸ ಮಾಡಿದ ಕೂಲಿಕಾರರಿಗೆ ಹಣ ನೀಡಲು ಸರ್ಕಾರದಿಂದ ಆಗುತ್ತಿಲ್ಲ. ಗುಳೆ ತಪ್ಪಿಸಲು ಖಾತ್ರಿ ಯೋಜನೆ ಜಾರಿಗೊಳಿಸಿದರೆ, ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿಲ್ಲ. ಅನುದಾನ ಬಿಡುಗಡೆಗೊಳಿಸುವುದರ ಜತೆಗೆ ರೈತ ಕೂಲಿಕಾರರಿಗೆ 5 ಸಾವಿರ ರೂ.ಮಾಸಾಶನ, ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ಎಲ್ಲ ಬಡವರಿಗೆ ಮನೆ ಮತ್ತು ನಿವೇಶನ ವಿತರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಶ್ರೀನಿವಾಸ ಹೊಸಳ್ಳಿ, ಮಂಜುನಾಥ ಡಗ್ಗಿ, ಹುಸೇನಪ್ಪ, ಜಿ.ನಾಗರಾಜ್, ಹುಲುಗಪ್ಪ, ಗಂಗಮ್ಮ, ಅಮೀನಾಬೀ ಇತರರು ಇದ್ದರು.