ತುಮಕೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರೋಧಿಸಿ ಹಾಗೂ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ತುಮಕೂರಿನಲ್ಲಿ ಬೆಂಬಲ ವ್ಯಕ್ತವಾಯಿತು. ಆದರೆ ಸಾರ್ವಜನಿಕರಿಗೆ ಎಲ್ಲಿಯೂ ತೊಂದರೆಯಾಗಲಿಲ್ಲ.
ನಗರದ ಬಿಜಿಎಸ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳಾದ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಐಎನ್‌ಟಿಯುಸಿ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. ಬೆಲೆ ಏರಿಕೆಗೆ ಕಡಿವಾಣ, ಉದ್ಯೋಗ ಸೃಷ್ಟಿ, 21 ಸಾವಿರ ರೂಪಾಯಿ ಕನಿಷ್ಠ ಕೂಲಿ, ಆರ್ಥಿಕ ಪ್ರಗತಿಗೆ ತಡೆಯೊಡ್ಡಿರುವ ನೀತಿಗಳ ಬದಲಾವಣೆ, ರೈತರ ಆತ್ಮಹತ್ಯೆ ತಡೆ, ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ, ಕೃಷಿ ಬಿಕ್ಕಟ್ಟು ನಿವಾರಣೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ, ಸ್ಕೀಂ ನೌಕರರ ಕಾಯಂಮಾತಿಗೆ, ಗುತ್ತಿಗೆ ಪದ್ಧತಿ ರದ್ದತಿಗೆ ಒತ್ತಾಯಿಸಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗೆ ಆಗ್ರಹಿಸಿ, ಮಾಸಿಕ 10 ಸಾವಿರ ರೂ. ಕನಿಷ್ಠ ಪಿಂಚಣಿಗೆ ಒತ್ತಾಯಿಸಿದರು.
ಎಐಟಿಯುಸಿ ನಾಯಕ ಎನ್.ಶಿವಣ್ಣ ಮಾತನಾಡಿ, ರಾಜ್ಯ ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸ್ ಇಲಾಖೆಯ ಮೂಲಕ ನಡೆಸಿರುವ ಪ್ರಯತ್ನಗಳಿಗೆ ನಮ್ಮ ದಿಕ್ಕಾರವಿದೆ, ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಬದಲು ಸಮಸ್ಯೆ ಬಗೆಹರಿಸಲಿ ಎಂದರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಲು ಸರ್ಕಾರದ ನೀತಿಗಳೇ ಕಾರಣ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಪ್ರತಿದಿನ ಸಾವಿರಾರು ಉದ್ಯೋಗಗಳನ್ನು ಕಳೆಯುವಂತಹ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಯುಟಿಯುಸಿ ನಾಯಕಿ ಮಂಜುಳಾ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಸಿಪಿಐ ಜಿಲ್ಲಾ ಮುಖಂಡ ಕಂಬೇಗೌಡ, ಸಮಾಜಸೇವಾಕರ್ತ ತಾಜುದ್ದೀನ್ ಷರೀಪ್, ರೈತ ಸಂಘದ ಮುಖಂಡರು ಹಾಗೂ ಎಐಟಿಯುಸಿ ಗಿರೀಶ್, ಎಸ್‌ಎಫ್‌ಐ ಈ.ಶಿವಣ್ಣ, ಎಐಡಿಎಸ್‌ಒ ಅಶ್ವಿನಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಕಾರ್ಯದರ್ಶಿ ರಂಗಧಾಮಯ್ಯ, ಖಜಾಂಚಿ ಪುಟ್ಟೇಗೌಡ, ಅಂಗನವಾಡಿ ನೌಕರರ ಸಂಘಟನೆ ಗಂಗಾ, ಪ್ರೇಮಾ, ಆಟೋ ಚಾಲಕರ ಸಂಘದ ಇಂತು, ಕಟ್ಟಡ ಕಾರ್ಮಿಕರ ಸಂಘದ ಗೋವಿಂದರಾಜು, ಎಐಟಿಯುಸಿ ನಾಯಕ ಆಶ್ವತ್ಥನಾರಾಯಣ್ ಇದ್ದರು.
ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಮುಷ್ಕರ ನಡೆಯಿತು. ಸಾರ್ವಜನಿಕರಿಗೆ ಎಲ್ಲಿಯೂ ತೊಂದರೆಯಾಗಲಿಲ್ಲ. ಸಾರಿಗೆ ವ್ಯವಸ್ಥೆ ಎಂದಿನಂತೆಯೇ ಇತ್ತು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೂ ಮುಷ್ಕರದ ಬಿಸಿ ತಟ್ಟಲಿಲ್ಲ. ಬಿಜಿಎಸ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿದ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಅಂಗಡಿ, ಆಸ್ಪತ್ರೆ, ಬೀದಿಬದಿಯ ವ್ಯಾಪಾರ ಕೂಡ ಎಂದಿನಂತೆ ನಡೆಯಿತು.
ಕಾರ್ಮಿಕರು ಅನುಭವಿಸುತ್ತಿರುವ ಸೌಲಭ್ಯಗಳು ಹಿರೀಕರ ತ್ಯಾಗಬಲಿದಾನಗಳ ಪ್ರತೀಕ, ಅದನ್ನು ಸ್ಮರಿಸುತ್ತಾ ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬಾರದಿದ್ದರೆ ಹೋರಾಟ ಸಾರ್ಥಕತೆ ಪಡೆಯಲಾರದು.
ಸಿ.ಯತಿರಾಜು ಹಿರಿಯ ಪರಿಸರವಾದಿಆರ್ಥಿಕ-ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸದ ಕೇಂದ್ರದ ಮೋದಿ ಸರ್ಕಾರ ಜನತೆಯನ್ನು ವಿಭಜಿಸುವ ಪೌರತ್ವ ಮಸೂದೆ ಜಾರಿಗೆ ತಂದಿರುವುದನ್ನು ಖಂಡನೀಯ.
ಎ.ನರಸಿಂಹಮೂರ್ತಿ ಜಿಲ್ಲಾ ಕೊಳೆಗೇರಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ