ಶಿರಾಡಿಯಲ್ಲಿ ನೀರಿಗಾಗಿ ಪ್ರತಿಭಟನೆ

ಉಪ್ಪಿನಂಗಡಿ:ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಬಳಕೆದಾರರು ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾ.ಪಂ.ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಅಡ್ಡಹೊಳೆ ಮಿತ್ತಮಜಲು ಪರಿಸರದಲ್ಲಿ 50ಕ್ಕಿಂತಲೂ ಹೆಚ್ಚು ಕುಟುಂಬ ವಾಸವಾಗಿದ್ದು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದು ಇಲ್ಲಿನ ಬಳಕೆದಾರರಿಗೆ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲ್ಲಿ ಜಿ.ಪಂ.ಹಾಗೂ ಗ್ರಾ.ಪಂ.ಅನುದಾನದಲ್ಲಿ ಇತ್ತೀಚೆಗೆ ಬೋರ್‌ವೆಲ್ ಕೊರೆಸಲಾಗಿದ್ದು ಪೈಪ್ ಲೈನ್ ಹಾಕಲಾಗಿದೆ. ಆದರೆ ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ಜಿ.ಪಂ.ಇಂಜಿನಿಯರ್ ಅವರಲ್ಲಿ ವಿಚಾರಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬಳಕೆದಾರ ಸಾಬುರ ಮಾತನಾಡಿ, ಗ್ರಾಮಸ್ಥರಿಂದ ಕುಡಿಯುವ ನೀರು ಪೂರೈಸುವುದು ಪಂಚಾಯಿತಿ ಹೊಣೆ ಎಂದರು.

ಸಮಸ್ಯೆ ಕುರಿತಂತೆ ಅಧ್ಯಕ್ಷರು ಸ್ಪಷ್ಟನೆ ನೀಡಿ ಸಂಜೆಯೊಳಗೆ ಬೋರ್‌ವೆಲ್‌ಗೆ ಪಂಪ್ ಅಳವಡಿಸುವುದಾಗಿ ಇಂಜಿನಿಯರ್ ಭರವಸೆ ನೀಡಿದ್ದಾರೆ ಎಂದರು. ಆದರೂ ಸಮಾಧಾನಗೊಳ್ಳದ ಬಳಕೆದಾರರು ಗ್ರಾ.ಪಂ.ಮುಂಭಾಗದಲ್ಲಿ ಕುಳಿತು ಪಂಚಾಯಿತಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಸಂದರ್ಭ ಅಧ್ಯಕ್ಷ ತಿಮ್ಮಯ್ಯ ಗೌಡರವರು, ಸಂಜೆಯೊಳಗೆ ಮಿತ್ತಮಜಲುನ ಬೋರ್‌ವೆಲ್‌ಗೆ ಪಂಪ್ ಇಳಿಸಿ ಆ ಪರಿಸರದ ಬಳಕೆದಾರರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಬಳಕೆದಾರರಾದ ವರ್ಗೀಸ್ ಅಡ್ಡಹೊಳೆ, ರಾಜು ಅಡ್ಡಹೊಳೆ, ಜೋಸ್, ಮರ್ಕೋಸ್, ಮೋಹನ್‌ಪಿಳ್ಳೆ ಮತ್ತಿತರರು ಪಾಲ್ಗೊಂಡಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಬಿಂದು ಕೆ.ಎಸ್., ಸದಸ್ಯರಾದ ಪ್ರಕಾಶ್, ರಾಜೇಶ್, ಕಾರ್ಯದರ್ಶಿ ಶಾರದಾ ಉಪಸ್ಥಿತರಿದ್ದರು.