ವಾರದಲ್ಲಿ ಸೌಲಭ್ಯ ನೀಡದಿದ್ದರೆ ರಸ್ತೆ ತಡೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಇಲ್ಲಿಯ ನವನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ನಾಗರಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಪಂಚಾಕ್ಷರಿ ನಗರ ಬಳಿಯ 100 ಅಡಿ ರಸ್ತೆ ಹಾಗೂ ವಿವಿಧ ಬಡಾವಣೆಗಳ ಒಳರಸ್ತೆ ಸುಧಾರಣೆ, ನಿಯಮಿತ ನೀರು ಪೂರೈಕೆ, ಬೀದಿದೀಪಗಳ ನಿರ್ವಹಣೆ, ಚರಂಡಿ ದುರಸ್ತಿ, ಕಸ ಸಂಗ್ರಹಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಶಾಂತನಗರದಿಂದ ಮೆರವಣಿಗೆ ಹೊರಟ ನೂರಾರು ನಾಗರಿಕರು, ವಲಯ ಕಚೇರಿ 4ಕ್ಕೆ ಆಗಮಿಸಿ ಕೆಲಕಾಲ ಧರಣಿ ನಡೆಸಿದರು. ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆಯವರು ಮುತುವರ್ಜಿ ವಹಿಸಿ ಅಗತ್ಯ ಸೌಲಭ್ಯ ಒಂದು ವಾರದೊಳಗೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಅಭಿವೃದ್ಧಿ ವಿಷಯದಲ್ಲಿ ಮಹಾನಗರ ಪಾಲಿಕೆಯು ನವನಗರ ಸುತ್ತಲಿನ ಬಡಾವಣೆ ಗಳಿಗೆ ತಾರತಮ್ಯ ಮಾಡುತ್ತಿದೆ. ಬೇರೆ ಎಲ್ಲ ಕಡೆ ಅಭಿವೃದ್ಧಿಯಾಗುತ್ತಿದ್ದರೂ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದರು.

ಕಳೆದ ಕೆಲ ತಿಂಗಳಿಂದ ಬಡಾವಣೆಗಳಲ್ಲಿ ಪೊಲೀಸ್ ಬೀಟ್ ಸಹ ಸರಿಯಾಗಿ ಮಾಡು ತ್ತಿಲ್ಲ. ಪಾಯಿಂಟ್​ಗಳಿಗೆ ಪೊಲೀಸರು ಬರುವು ದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪಾಲಿಕೆ ಸದಸ್ಯ ಕರಿಯಪ್ಪ ಬೀಸಗಲ್ಲ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ತಾವು ಯಾವುದೇ ತಾರತಮ್ಯ ಮಾಡಿಲ್ಲ. ಅನುದಾನವನ್ನು ಸರಿಯಾಗಿ ಎಲ್ಲ ಬಡಾವಣೆಗಳಿಗೆ ಹಂಚಿಕೆ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಪಿ.ಎಸ್. ಡೆಂಗ್ರೆ, ರಮೇಶ ಜೋಶಿ, ಹನಮಂತ ಕೊರವರ, ಮಿಲಿಂದ ಕುಲಕರ್ಣಿ, ಅಳಗುಂಡಗಿ ಹಾಗೂ ಬಸವಾ ಎಸ್ಟೇಟ್, ಪಂಚಾಕ್ಷರಿ ನಗರ, ಶಾಂತನಗರ, ಪ್ರಜಾನಗರ, ಕೆಸಿಸಿ ಲೇಔಟ್, ಅಮರನಗರ, ನೀಲಗುಂದ ಲೇಔಟ್ ಹಾಗೂ ಸುತ್ತಮುತ್ತಲಿನ ಬಡಾವಣೆ ಜನರು ಪ್ರತಿಭಟನೆಯಲ್ಲಿದ್ದರು.