ವೈದ್ಯರ ಕೊರತೆ ನೀಗಿಸಲು ಆಗ್ರಹ

<<ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ | ರೋಗಿಗಳು, ಮಕ್ಕಳಿಂದ ಪ್ರತಿಭಟನೆ>>

ಮುದ್ದೇಬಿಹಾಳ: 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ ಖಂಡಿಸಿ ಶನಿವಾರ ಮಧ್ಯಾಹ್ನ ಆಸ್ಪತ್ರೆ ಬಾಗಿಲು ಮುಚ್ಚಿ ಅನಾರೋಗ್ಯ ಪೀಡಿತ ಮಕ್ಕಳು, ಮಹಿಳೆಯರು ಪ್ರತಿಭಟನೆ ನಡೆಸಿದರು.

ಶಾಂತಾ ಜಾಲವಾದಗಿ, ಲಕ್ಷ್ಮಿ ಶಿಂಧೆ ಮಾತನಾಡಿ, ಚಿಕಿತ್ಸೆ ಪಡೆಯಲು ಬೆಳಗ್ಗೆ 9 ಗಂಟೆಯಿಂದಲೆ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಬಂದರೂ ಒಬ್ಬ ವೈದ್ಯರೂ ಲಭ್ಯವಿಲ್ಲ. 200-250 ಜನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದರೂ 11 ಗಂಟೆವರೆಗೆ ಒಬ್ಬರೇ ವೈದ್ಯರು ರೋಗಿಗಳ ತಪಾಸಣೆ ನಡೆಸುತ್ತಿದ್ದು, ಉಳಿದ ಇಬ್ಬರಲ್ಲಿ ಒಬ್ಬರು ರಜೆ ಹಾಕಿದ್ದರೆ, ಇನ್ನೊಬ್ಬರು ದೀರ್ಘ ರಜೆ ಹಾಕಿ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾದರೆ 100 ಹಾಸಿಗೆ ಆಸ್ಪತ್ರೆಯೆಂದು ಇದನ್ಯಾಕೆ ಕಟ್ಟಿಸಬೇಕು. ನಮ್ಮ ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಅನಾರೋಗ್ಯ ಪೀಡಿತ ಮಕ್ಕಳನ್ನು ಇಲ್ಲಿನ ವೈದ್ಯರೊಬ್ಬರು ದೂರದಿಂದಲೇ ಪರೀಕ್ಷೆ ಮಾಡುತ್ತಾರೆ. ಮುಟ್ಟಲು ಹೋಗುವುದಿಲ್ಲ. ಇಂತಹ ವೈದ್ಯರು ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಸೇವಕಿ ಮುನ್ನಿ ಮುಲ್ಲಾ,ಅಮರೇಶ ನಾಯ್ಕಮಕ್ಕಳ ಮಾತನಾಡಿ, ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸರಿಯಾಗಿ ಊಟ ಕೊಡುವುದಿಲ್ಲ. ವೈದ್ಯಕೀಯ ಪ್ರಮಾಣಪತ್ರ ಕೊಡಲು ಹಣ ವಸೂಲಿ ಮಾಡುತ್ತಾರೆ. ಇಲ್ಲಿನ ನೌಕರರು ತಮಗೆ ನಿಯೋಜಿಸಿದ ಕೆಲಸ ಮಾಡುವುದನ್ನು ಬಿಟ್ಟು ಬೇರೊಂದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅರ್ಧ ಗಂಟೆವರೆಗೆ ಆಸ್ಪತ್ರೆ ಬಾಗಿಲು ಮುಚ್ಚಿದ ಪ್ರತಿಭಟನಾಕಾರರು, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ತಿಂಗಳಿಗೊಮ್ಮೆ ಪ್ರತಿಭಟನೆ ನಡೆಯುತ್ತಿದ್ದರೂ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೀತಾರಾಮ ರಾಠೋಡ, ಆನಪ್ಪ ಬೈಲಪತ್ತಾರ, ಕೆ.ಎಚ್. ಪಡೇಕನೂರ, ಬಸವರಾಜ ಕುಂಬಾರ, ಬಸಪ್ಪ ಕಕ್ಕೇರಿ ಇನ್ನಿತರರು ಇದ್ದರು.

ಆಸ್ಪತ್ರೆಗೆ ಧಾವಿಸಿದ ವೈದ್ಯರು

ಪ್ರತಿಭಟನೆ ನಡೆಸುತ್ತಿದ್ದ ಸುದ್ದಿ ತಿಳಿದ ತಕ್ಷಣ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ರಜೆ ಮೇಲಿದ್ದ ಡಾ.ಎಂ.ಎಸ್.ಪಾಟೀಲ, ಡಾ.ಎಸ್.ಎಸ್.ಪಟ್ಟಣದ ಹಾಗೂ ಡಾ.ನಾಗರಬೆಟ್ಟ ಅವರನ್ನು ತುರ್ತಾಗಿ ಆಸ್ಪತ್ರೆಗೆ ಕಳಿಸಿಕೊಟ್ಟರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ರೋಗಿಗಳನ್ನು ತಪಾಸಣೆ ನಡೆಸಿದ ವೈದ್ಯರು ಅರ್ಧ ಗಂಟೆಯಲ್ಲಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆ ನಡೆಸಿದರು.

ಸೇವೆ ಸಲ್ಲಿಸಲು ನಿರಾಕರಿಸುತ್ತಿರುವ ವೈದ್ಯರು

ವೈದ್ಯರು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಬಸವನಬಾಗೇವಾಡಿ ಸೇರಿದಂತೆ ಬೇರೆ ಊರಿನ ಆಸ್ಪತ್ರೆಗಳಲ್ಲಾದರೆ ಸೇವೆಗೆ ಮುಂದಾಗುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈದ್ಯರೆ ಮುಂದೆ ಬರುತ್ತಿಲ್ಲ. ಏನು ಮಾಡುವುದು, ಇದ್ದ ಸಿಬ್ಬಂದಿಯನ್ನೆ ನಿಯೋಜನೆ ಮಾಡಿದ್ದೇವೆ.

| ಡಾ.ರಾಜಶೇಖರ ಯರಗಲ್, ಡಿಎಚ್​ಒ

Leave a Reply

Your email address will not be published. Required fields are marked *