More

    ಬೆಳೆ ವಿಮೆ, ಪರಿಹಾರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

    ಬ್ಯಾಡಗಿ: ರೈತರಿಗೆ ಸಮರ್ಪಕ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ವಿತರಣೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಶೇ. 75 ರಿಯಾಯಿತಿಯಲ್ಲಿ ಬೀಜ, ಗೊಬ್ಬರ ವಿತರಣೆಗೆ ಆದೇಶಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತರಿಂದ ವಿಮೆ ಕಂತು ತುಂಬಿಸಿಕೊಂಡು ವಿಮಾ ಕಂಪನಿಗಳು ಕ್ಲೇಮು ಹಣ ನೀಡುವಾಗ ವಿಳಂಬ ಧೋರಣೆ ಅನುಸರಿಸುತ್ತಿವೆ. ವಿಮೆ ಕಂತು ತುಂಬಿಸಿಕೊಳ್ಳುವ ಕೊನೆಯ ಅವಧಿ ನಿರ್ಧರಿಸುವ ಕಂಪನಿ ವ್ಯವಸ್ಥಾಪಕರು, ವಿಮೆ ಮೊತ್ತ ನೀಡುವ ದಿನ ಏಕೆ ನಿರ್ಧರಿಸುವುದಿಲ್ಲ..? ಈ ಕುರಿತು ಕೂಡಲೇ ಸಂಬಂಧಿಸಿದ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು. ತಾಲೂಕು ಕೇಂದ್ರದಲ್ಲಿ ವಿಮಾ ಕಂಪನಿ ಪ್ರತಿನಿಧಿ ಕಾಯಂ ಆಗಿ ಕಾರ್ಯನಿರ್ವಹಿಸಬೇಕು. ಅವರು ಬಂದು ಹೋಗಿರುವ ಕುರಿತು ಕೃಷಿ ಇಲಾಖೆಯಲ್ಲಿ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    ಕಳೆದ ಎಂಟು ತಿಂಗಳಿಂದ ಜಿಲ್ಲೆಯ ರೈತರಿಗೆ ಹಾಲಿನ 5 ರೂ. ಪ್ರೋತ್ಸಾಹಧನ ಬಂದಿಲ್ಲ. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಹಣ ಬಿಡುಗಡೆಗೊಳಿಸಿ ರೈತ ಹಿತ ಕಾಯಬೇಕು ಎಂದು ಮನವಿ ಮಾಡಿದರು.

    ಬ್ಯಾಂಕ್ ಖಾತೆಗೆ ಸಹಾಯಧನ, ಬೆಳ ವಿಮೆ, ಬೆಳೆ ಪರಿಹಾರ ಜಮೆಯಾಗುತ್ತಿದ್ದಂತೆ ವ್ಯವಸ್ಥಾಪಕರು ಖಾತೆ ಲಾಕ್ ಮಾಡಿ ರೈತರಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಒಟಿಎಸ್ ಮಾಡಿಕೊಡಲು ವ್ಯವಸ್ಥಾಪಕರು ಹಿಂದೇಟು ಹಾಕುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರ ಸಹಯೋಗದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

    ತಹಸೀಲ್ದಾರ್ ಎಸ್.ವಿ. ಪ್ರಸಾದ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ, ಚಿಕ್ಕಪ್ಪ ಛತ್ರದ, ಕಿರಣಕುಮಾರ ಗಡಿಗೋಳ, ಗ್ರಾಪಂ ಸದಸ್ಯ ಕರಬಸಪ್ಪ ಶಿರಗಂಬಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts