ಬಸವನಬಾಗೇವಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಅವರ ಡಿಕೆಶಿ ಭಾವಚಿತ್ರ ದಹಿಸಿ, ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡುವಲ್ಲಿ ತೊಂದರೆಯಾದರೆ ನಾವು ಸಂವಿಧಾನ ಬದಲಿಸಲು ಸಿದ್ಧ ಎಂದು ಉದ್ಧಟತನದ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಕೇವಲ ಒಂದು ಸಮುದಾಯದ ಓಲೈಕೆಗಾಗಿ ಈ ತರ ಹೇಳಿಕೆ ನೀಡುವುದು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ರಾಜ್ಯದಲ್ಲಿ ಹನಿಟ್ರ್ಯಾಪ್ ಬಗ್ಗೆ ಸ್ವಪಕ್ಷದ ಸಚಿವರೇ ಶಾಸಕರೇ ಆರೋಪಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರವಿಲ್ಲ. ರಾಜ್ಯದ ಹಿರಿಯ ಸಚಿವರಾದ ಕೆ. ರಾಜಣ್ಣ, ಸತೀಶ ಜಾರಕಿಹೊಳಿ ಸೇರಿ ಹಲವಾರು ಕಾಂಗ್ರೆಸ್‌ನ ಶಾಸಕರುಗಳೇ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಹೇಳಿಕೆ ನೀಡುತ್ತಿರುವುದು ಒಂದೆಡೆಯಾದರೆ, ಎರಡು ವರ್ಷಗಳ ನಂತರ ತಾನು ಸಿಎಂ ಆಗಬೇಕೆಂದು ಡಿ. ಕೆ. ಶಿವಕುಮಾರ್ ಮಾಡುತ್ತಿರುವ ಪ್ರಯತ್ನವೂ ಜಗಜ್ಜಾಹೀರವಾಗಿದೆ. ಸದನ ನಡೆಯುವ ಸಂದರ್ಭ ಹನಿಟ್ರಾೃಪ್ ಬಗ್ಗೆ ಬಿಜೆಪಿ ಆರೋಪ ಮಾಡಿಲ್ಲ, ಆಡಳಿತ ಪಕ್ಷದ ಸಚಿವರುಗಳೇ ಮಾಡಿದ ಆರೋಪವಾಗಿದೆ. ಅಲ್ಲದೆ, ಮೊಬೈಲ್ಗಳು ಟ್ರಾಪ್ ಆಗುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹನಿಟ್ರಾೃಪ್ ಬಗ್ಗೆ ಸಿಬಿಐ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಶಿವಾನಂದ ಅವಟಿ, ಕಲ್ಲು ಸೊನ್ನದ, ಬಸವರಾಜ ಬಿಜಾಪೂರ, ವೈ.ಸಿ. ಯಳಮೇಲಿ, ಅರುಣಕುಮಾರ ದೇಸಾಯಿ, ರಾಜಶೇಖರ ಶಿಲವಂತ, ಅಪ್ಪಾಸಿ ಮಟ್ಯಾಳ, ಸೋಮು ಹಂಡಿ, ಸಂತೋಷ ನಾಯಕ, ಮುತ್ತು ಕಿಣಗಿ, ವಿಜಯ ಪೂಜಾರ, ಶರಣು ಮುರನಾಳ, ರಾಜೇಶ್ವರಿ ಯರನಾಳ, ಹೇಮಾ ದಳವಾಯಿ ಇತರರಿದ್ದರು.
