ಶಿವಮೊಗ್ಗ: ರಾಜ್ಯ ಸರ್ಕಾರ ಗೋರಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸದೆ, ಅವರ ವಾಹನಗಳನ್ನು ಜಪ್ತಿ ಮಾಡದೆ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಯನಗರದ ಪೊಲೀಸ್ ಠಾಣೆ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ಹಿಂದು ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾನೂನನ್ನು ಪಾಲಿಸದೆ ಹಿಂದುಗಳು, ಗೋರಕ್ಷರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ಒಲೈಕೆಗಾಗಿ ಹಿಂದುಗಳ ಮೇಲೆ ನಾನಾ ರೀತಿಯ ದಬ್ಬಾಳಿಕೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿ ಕಾರ್ಯಕರ್ತರ ಮನೆಗೆ ಪೊಲೀಸರನ್ನು ಕಳುಹಿಸಿ ಭೇಟಿ ನೀಡಿ ಅವರ ಹಿಂದುಗಳ ಮಾನಸಿಕತೆ ಕುಗ್ಗಿಸುತ್ತಿದೆ. ರಾಜ್ಯದಲ್ಲಿ ಗೋ ಹತ್ಯೆ ಕಾನೂನು ನಿಷೇಧವಿದ್ದು, ಅಕ್ರಮ ಗೋ ಸಾಗಣೆ ಕಾನೂನು ಬಾಹಿರವಾಗಿದ್ದರೂ ಗೋ ಹತ್ಯೆಗಳು ನಿರಂತರವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ, ಎಂಎಲ್‌ಸಿ ಡಿ.ಎಸ್.ಅರುಣ್, ಹಿಂದು ಮುಖಂಡ ದಿನ ದಯಾಳ್, ವಿಭಾಗ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ಆನಂದ ರಾವ್, ಬಜರಂಗದಳದ ಸಂಯೋಜಕ ವಡಿವೇಲು, ಸಹ ಸಂಯೋಜಕರಾದ ಅಂಕುಶ್, ಸುರೇಶ್ ಬಾಬು ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ಪೊಲೀಸರಿಂದ ಗೋ ರಕ್ಷಕರಿಗೆ ಕಿರುಕುಳ
ಶಾಂತಿಸಭೆಗಳಲ್ಲಿ ಅಕ್ರಮ ಗೋ ಸಾಗಣೆ ಬಗ್ಗೆ ಮಾಹಿತಿ ಕೊಡುವಂತೆ ಹೇಳುವ ಪೊಲೀಸರೆ ಗೋ ರಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಉಸ್ತುವಾರಿ ಸಚಿವರ ಅಣತಿಯಂತೆ ಕೆಲಸ ಮಾಡುತ್ತಿದ್ದು, ಇನ್ಮುಂದೆ ಯಾವುದನ್ನೂ ಸಹಿಸುವುದಿಲ್ಲ ಎಂದು ವಿಎಚ್‌ಪಿ ಪ್ರಾಂತ ಸಾಮರಸ್ಯ ಪ್ರಮುಖ್ ರಮೇಶ್ ಬಾಬು ಜಾಧವ್ ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲ ಇಲಾಖೆಗಳು ಕೃಪಪೋಷಿತ ನಾಟಕ ಕಂಪನಿಗಳಾಗಿವೆ. ಸಾಮಾಜಿಕ ಕಳಕಳಿಯಿಂದ ಹೋರಾಟ ಮಾಡಬೇಕಿದ್ದು, ಅಕ್ರಮವಾಗಿ ಗೋ ಸಾಗಣೆ ಸಂಬಂಧ ಎಷ್ಟು ಕೇಸ್ ಹಾಕಿದ್ದೀರಿ, ಎಷ್ಟು ಗೋವು ರಕ್ಷಣೆ ಮಾಡಿದ್ದೀರಿ, ಎಷ್ಟು ವಾಹನಗಳನ್ನುಜಪ್ತಿ ಮಾಡಿದ್ದೀರಿ ಮಾಹಿತಿ ನಿಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.