ಕೆ.ಆರ್.ಸಾಗರ: ಕೆ.ಆರ್.ಸಾಗರದ ಅಣೆಕಟ್ಟೆಯ ಬೃಂದಾವನದಲ್ಲಿ ರಾಜ್ಯ ಸರ್ಕಾರ ನಿರ್ಮಾಣಕ್ಕೆ ಮುಂದಾಗಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಧ ಸಂಘಟನೆಗಳು ಬೃಂದಾವನದ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸಿದವು.
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ವೇದಿಕೆ ಸಮಿತಿ ನೇತೃತ್ವದಲ್ಲಿ ರೈತಸಂಘ, ದಲಿತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ರಕ್ಷಣಾ ವೇದಿಕೆ, ಕೆ.ಆರ್.ಸಾಗರ ಗ್ರಾ.ಪಂ, ಹುಲಿಕರೆ ಗ್ರಾ.ಪಂ ಸದಸ್ಯರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕಿ ಸುನಂದ ಜಯರಾಂ ಮಾತನಾಡಿ, ಕಳೆದ ವಾರ ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನುಡಿದಂತೆ ನಡೆದುಕೊಳ್ಳಬೇಕು. ಅಂದು ತೆಗೆದುಕೊಂಡ ನಿರ್ಣಯದಂತೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕಾಮಗಾರಿ ನಡೆಸುವುದಿಲ್ಲ ಎಂದು ತಿಳಿಸಿದ್ದರು. ಆದರೂ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದು ಸರಿಯಲ್ಲ, ಅಣೆಕಟ್ಟೆಯ ಭದ್ರತೆಗೆ ಧಕ್ಕೆಯುಂಟು ಮಾಡುವ, ಪರಿಸರ ಹಾಗೂ ಜಲಮಾಲಿನ್ಯ ಉಂಟು ಮಾಡುವ ಯೋಜನೆಗಳನ್ನೇಕೆ ಮಾಡುತ್ತಿದ್ದಾರೆ? ರೈತರಿಗೆ ವರವಾಗಿದ್ದ ಕೆ.ಆರ್.ಸಾಗರ ಅಣೆಕಟ್ಟೆಯನ್ನು ಇಂದು ಮೋಜಿನ ಪಾರ್ಕ್ ಮಾಡಲು ಹೋಗುತ್ತಿದ್ದಾರೆ. ಈ ಯೋಜನೆ ಸಂಪೂರ್ಣ ನಿಲ್ಲುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಈ ಹಿಂದೆ ಕಲ್ಲುಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಎದುರಾಗಿತ್ತು. ನಮ್ಮೆಲ್ಲರ ಹೋರಾಟದಿಂದ ಗಣಿಗಾರಿಕೆ ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಸಂಪೂರ್ಣ ನಿಂತಿದೆ. ಈಗ ಸಾವಿರಾರು ಕೋಟಿ ರೂ. ವ್ಯಯಿಸಿ ಅಣೆಕಟ್ಟೆಯ ಬಳಿ ಕಾಮಗಾರಿ ಮಾಡುತ್ತಿದ್ದು, ಈ ಯೋಜನೆಯಿಂದ ಅಣೆಕಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ. ರೈತರ ಜಮೀನುಗಳಿಗೆ ತೊಂದರೆಯಾಗಲಿದೆ. ಈ ಯೋಜನೆಯನ್ನು ಬೃಂದಾವನದಲ್ಲಿ ಕೈ ಬಿಟ್ಟು ಜಿಲ್ಲೆಯಲ್ಲಿ ಬೇರೆಡೆ ಸ್ಥಳಾಂತರ ಮಾಡಲಿ, ಶ್ರೀರಂಗಪಟ್ಟಣದ ನಿಮಿಷಾಂಭದಲ್ಲಿ ಕಾವೇರಿ ಆರತಿ ಯೋಜನೆ ಮಾಡಲಿ. ಅಲ್ಲಿ ಉತ್ತಮ ಜಾಗವಾಗಿದೆ ಎಂದು ಒತ್ತಾಯಿಸಿದರು.
ಯೋಜನೆ ಸ್ಥಳಾಂತರ ಮಾಡದಿದ್ದರೆ ಹೋರಾಟ ನಡೆಯಲ್ಲಿದ್ದು, ಈ ಪ್ರತಿಭಟನೆ ಮುಂದಿನ ದಿನಗಳಲ್ಲಿ ತೀವ್ರವಾಗಲಿದೆ ಎಂದು ಎಚ್ಚರಿಸಿದರು.
ಸಾಹಿತಿ ಹರಿಹರ ಪ್ರಿಯ ಹೋರಾಟಗಾರ ಬೋರಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯ ಜೀವನಾಡಿಗೆ ತೊಂದರೆಯಾಗುವ ರೀತಿಯಲ್ಲಿ ರಾಜಕಾರಣಿಗಳ ಲಾಭಕ್ಕಾಗಿ ದುಷ್ಕೃತ್ಯಗಳು ನಡೆಯುತ್ತಿವೆ.
ಈ ಅಣೆಕಟ್ಟೆ ಕಟ್ಟಿದ್ದು ರೈತರಿಗೋಸ್ಕರ, ಹಿಂದಿನ ಇತಿಹಾಸ ಓದಿದರೆ ರಾಜಕಾರಣಿಗಳಿಗೆ ತಿಳಿಯುತ್ತಿದೆ. ಕೆ.ಆರ್.ಸಾಗರ ಅಣೆಕಟ್ಟೆ ಕಟ್ಟಿದ್ದು ಅಂದು 9 ಜಿಲ್ಲೆಗಳ ರೈತ ಹಿತಕ್ಕಾಗಿ. ಅವರು ಬೆಳೆ ಬೆಳೆಯಲು ಅಂದು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಷ್ಟುಪಟ್ಟು, ಅವರ ಮನೆಯ ಒಡವೆ ಇಟ್ಟು ಕಟ್ಟಿಸಿದ್ದು, ಇಂದು ಆ ಅಣೆಕಟ್ಟೆಯ ಭದ್ರತೆ ಲೆಕ್ಕಿಸದೆ ಈ ತರಹದ ಯೋಜನೆ ಮಾಡಲು ಹೊರಟ್ಟಿರುವುದರಿಂದ ಕಾವೇರಿ ತೀರದ ಜಿಲ್ಲೆಯ ರೈತರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಇಇ ಜಯಂತ ಅವರನ್ನು ಸುನಂದಾ ಜಯರಾಂ ಹಾಗೂ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಕಾವೇರಿ ಆರತಿ ಯೋಜನೆ ತರಾತುರಿಯಲ್ಲಿ ಪ್ರಾರಂಭ ಮಾಡಿದ್ದು ಏಕೆ? ವಿಶ್ವೇಶ್ವರಯ್ಯ ನಾಲೆಯ ಮಣ್ಣು ಬಳಸಲು, ಮರ ಕಡಿಯಲು ಅನುಮತಿ ಇದೆಯಾ? ಟೆಂಡರ್ ಅಗ್ರಿಮೆಂಟ್ ತೋರಿಸಿ ಎಂದು ಪಟ್ಟು ಹಿಡಿದರು. ಕೆಲ ಸಮಯ ಜಯಂತ್ ತಬ್ಬಿಬ್ಬಾದರು. ಉತ್ತರ ನೀಡದೆ ಮೌನವಾದರು. ಆಗ ಮತ್ತೆ ಪ್ರಶ್ನೆ ಮಾಡಿದಾಗ ಸಮಜಾಯಿಷಿ ನೀಡಲು ಮುಂದಾದರು. ಈ ಕಾಮಗಾರಿ ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದ ಮುಂದಿನ ಆದೇಶ ಬರುವ ತನಕ ಕಾಮಗಾರಿ ಪ್ರಾರಂಭಿಸುವುದಿಲ್ಲ. ಈಗ ನದಿಗೆ ಹಾಕಿರುವ ಮಣ್ಣನ್ನು ಮತ್ತೆ ಅದೇ ಜಾಗಕ್ಕೆ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಾಹಿತಿ ಹರಿಹರ ಪ್ರಿಯ, ಹೋರಾಟಗಾರ ಬೋರಯ್ಯ, ರೈತ ಮುಖಂಡರಾದ ಇಂಡವಾಳು ಚಂದ್ರಶೇಖರ್, ಕಾರಸವಾಡಿ ಸುಧೀರ್ ಕುಮಾರ್, ಮಂಜೇಶ್ ಗೌಡ, ರೈತ ಸಂಘದ ನಾಗೇಂದ್ರಸ್ವಾಮಿ, ಕೃಷಿಕ ಸಮಾಜ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ಕೆನ್ನಾಳು ವಿಜಯಕುಮಾರ್, ಮಂಜು, ಹರವು ಪ್ರಕಾಶ್, ರಘು, ಡಿಎಸ್‌ಎಸ್ ಮುಖಂಡ ಎಂ.ವಿ.ಕೃಷ್ಣ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ನಾರಯಣ, ಎಂ.ಬಿ.ನಾಗಣ್ಣಗೌಡ, ಎಸ್.ಡಿ. ಜಯರಾಂ, ಕೆ.ಆರ್.ಸಾಗರ ಗ್ರಾ.ಪಂ ಅಧ್ಯಕ್ಷ ಜಯಂತಿ, ಉಪಾಧ್ಯಕ್ಷ ಪಾಪಣ್ಣ, ಕೆ.ಆರ್.ಸಾಗರ ಗ್ರಾ.ಪಂ ಸದಸ್ಯರಾದ ಮಂಜುನಾಥ್, ನರಸಿಂಹ, ರವಿಶಂಕರೇಗೌಡ, ಶ್ರುತಿ ಶ್ರೀನಿವಾಸ, ಮಂಜುಳಾ ಪ್ರಕಾಶ, ಶಶಿಕಲಾ ಮಹದೇವ, ಮಂಗಳಗೌರಿ, ಬಂಗಾರಪ್ಪ, ಪ್ರಕಾಶ್, ಮಂಜು, ರಾಜು ಇತರರು ಇದ್ದರು.
ಕೆ.ಆರ್.ಸಾಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar
Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…