ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಕೆಲ ಬೇಲ್‌ಗಳನ್ನು ಖರೀದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಶನಿವಾರ ರೈತರು ವರ್ತಕರ ಮೇಲೆ ಹೊಗೆಸೊಪ್ಪು ಎಸೆದು ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ವರ್ತಕರು ಕೆಲ ಬೇಲ್‌ಗಳ ಬಿಡ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಕುಪಿತರಾದ ರೈತರು ಹೊಗೆಸೊಪ್ಪು ವರ್ತಕರು ಮತ್ತು ಅಧಿಕಾರಿಗಳತ್ತ ಹೊಗೆಸೊಪ್ಪು ತೂರಿ ಘೋಷಣೆ ಕೂಗಿದರು. ಇದರಿಂದ ವಿಚಲಿತರಾದ ವರ್ತಕರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರು.
ನಂತರ ರೈತರು ಕಚೇರಿ ಮುಂದೆ ಧರಣಿ ಕುಳಿತರು. ಕಳೆದ ಕೆಲ ದಿನಗಳಿಂದ ತಂಬಾಕಿಗೆ ಸೂಕ್ತ ಬೆಲೆ ನೀಡುತ್ತಿಲ್ಲ, ದರ ಕುಸಿತವಾಗಿದ್ದು ಮನಸ್ಸೋ ಇಚ್ಛೆ ಖರೀದಿ ಮಾಡುತ್ತಿದ್ದಾರೆ. ಕೆಲ ಬೇಲ್‌ಗಳ ಬಿಡ್ ಕೂಡ ನಡೆಯುತ್ತಿಲ್ಲ. ಅಪಾರ ಹಣ ಸಾಲ ಮಾಡಿ ತಂಬಾಕು ಬೆಳೆದು ಕೈ ಸುಟ್ಟುಕೊಳ್ಳುವಂತಾಗಿದೆ. ತಂಬಾಕು ಉತ್ಪಾದಿಸಿದ ತಪ್ಪಿಗೆ ಮಾರುಕಟ್ಟೆಯಲ್ಲಿ ವರ್ತಕರ ಹಾವಳಿಗೆ ಸಿಲುಕಿ ರೋಸಿ ಹೋಗಿದ್ದೇವೆ ಎಂದು ಪ್ರತಿಭಟನಾ ನಿರತ ರೈತರು ಕಿಡಿಕಾರಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.